
ಮಾಂಗಫ್: ಕುವೈತ್ನ ಮಾಂಗಫ್ ನಗರದಲ್ಲಿ ಕಾರ್ಮಿಕರ ವಸತಿ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕನಿಷ್ಠ 41 ಮಂದಿ ಸಜೀವ ದಹನಗೊಂಡಿದ್ದಾರೆ.
ಗಾಯಗೊಂಡ ಸುಮಾರು 43 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ 4 ಮಂದಿ ಮೃತಪಟ್ಟಿದ್ದಾರೆ ಎಂದು ಕುವೈತ್ ಆರೋಗ್ಯ ಸಚಿವಾಲಯ ತಿಳಿಸಿದೆ. ಘಟನೆಯಲ್ಲಿ ಭಾರತ ಮೂಲದ 30ಕ್ಕೂ ಅಧಿಕ ಕಾರ್ಮಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದುರ್ಘಟನೆ ಸಂಭವಿಸುತ್ತಲೇ ಕುವೈತ್ ಪ್ರಧಾನಿ ಶೇಖ್ ಫಹಾದ್ ಯುಸುಫ್ ಸೌದ್ ಅಲ್-ಸಬಾಹ್ ಭೇಟಿ ನೀಡಿದ್ದು, ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ದುರಂತ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಕುವೈತ್ನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸುಮಾರು 11 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲ, ಅಗತ್ಯ ನೆರವು ನೀಡಲು ಕೂಡ ಕ್ರಮ ತೆಗೆದುಕೊಂಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕೂಡ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರ ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ, ಬುಧವಾರ ಮುಂಜಾನೆ 4.30ಕ್ಕೆ ಕಾರ್ಮಿಕ ಶಿಬಿರದ ಅಡುಗೆಮನೆಯಲ್ಲಿ ಬೆಂಕಿ ಪ್ರಾರಂಭಗೊಂಡಿತ್ತು. ಬೆಂಕಿಯನ್ನು ನೋಡಿದ ನಂತರ ಕೆಲವರು ಅಪಾರ್ಟ್ಮೆಂಟ್ನಿಂದ ಜಿಗಿದು ಮೃತಪಟ್ಟಿದ್ದರೆ ಇತರರು ಸುಟ್ಟಗಾಯಗಳು ಮತ್ತು ಹೊಗೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮತಪಟ್ಟವರಲ್ಲಿ ಹೆಚ್ಚಿನವರು ಕೇರಳ ಹಾಗೂ ತಮಿಳುನಾಡಿನವರಾದರೆ, ಉಳಿದವರು ಉತ್ತರ ಭಾರತದವರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಭಾರತೀಯ ಉದ್ಯಮಿಯ ಒಡೆತನದ ಕಟ್ಟಡ: ವರದಿ
ಒನ್ಮನೋರಮಾ ವರದಿಯ ಪ್ರಕಾರ, ಹತ್ತಿರದ ವಾಣಿಜ್ಯ ಪ್ರದೇಶದ ಸುಮಾರು 195 ಕಾರ್ಮಿಕರು ಮತ್ತು ಹಲವಾರು ಮಲಯಾಳಿಗಳನ್ನು ವಾಸಿಸುತ್ತಿದ್ದ ಈ ಈ ಕಟ್ಟಡವು ಎನ್ಬಿಟಿಸಿ ಗ್ರೂಪ್ ಗೆ ಸೇರಿದ್ದು. ಕೇರಳದ ಉದ್ಯಮಿ ಕೆಜಿ ಅಬ್ರಹಾಂ ಅವರ ಒಡೆತನದಲ್ಲಿರುವ ಈ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದ್ದರೂ, ಇನ್ನೂ ಹಲವಾರು ಮಂದಿ ಒಳಗೆ ಸಿಲುಕಿರುವ ವರದಿಗಳಿವೆ.
ಕುವೈತ್ನ ಒಟ್ಟು ಜನಸಂಖ್ಯೆಯಲ್ಲಿ ಭಾರತೀಯರು ಶೇಕಡಾ 21ರಷ್ಟಿದ್ದು,ಅದರಲ್ಲಿ ಶೇ.30 ರಷ್ಟು (ಅಂದಾಜು 9 ಲಕ್ಷಗಳು) ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕುವೈತ್ ನಗರದಲ್ಲಿ ಬೆಂಕಿ ಅವಘಡದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಮತ್ತು 50 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಾವು ಕಾಯುತ್ತಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.
ಕುವೈತ್ನ ಆಂತರಿಕ ಸಚಿವ ಶೇಖ್ ಫಹಾದ್ ಅಲ್-ಯೂಸುಫ್ ಅಲ್-ಸಬಾಹ್ ಅವರು ಮಾರಣಾಂತಿಕ ಬೆಂಕಿ ಅನಾಹುತ ಸಂಭವಿಸಿದ ಮಂಗಾಫ್ ಕಟ್ಟಡದ ಮಾಲೀಕರು, ಕಟ್ಟಡದ ದ್ವಾರಪಾಲಕ ಮತ್ತು ಕಾರ್ಮಿಕರಿಗೆ ಹೊಣೆಗಾರರಾಗಿರುವ ಕಂಪನಿಯ ಮಾಲೀಕರನ್ನು ಅಪರಾಧಿ ಅವರನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.
ಇಂದು ಸಂಭವಿಸಿರುವುದು ಕಂಪನಿ ಮತ್ತು ಕಟ್ಟಡ ಮಾಲೀಕರ ದುರಾಸೆಯ ಪರಿಣಾಮವಾಗಿದೆ ಎಂದು ಬೆಂಕಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ವಸತಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕೂಡಿಹಾಕಿರುವುದು ಕಾನೂನು ಉಲ್ಲಂಘನೆ . ತಕ್ಷಣದ ಕ್ರಮವನ್ನು ಕೈಗೊಳ್ಳಲು ಕುವೈತ್ ಪುರಸಭೆ ಮತ್ತು ಮಾನವಶಕ್ತಿಯ ಸಾರ್ವಜನಿಕ ಪ್ರಾಧಿಕಾರಕ್ಕೆ ಆದೇಶವನ್ನು ನೀಡಿದ್ದೇನೆ ಮತ್ತು ಇದೇ ರೀತಿ ಎಲ್ಲಾ ಸುರಕ್ಷತಾ ಅವಶ್ಯಕತೆಗಳು ಜಾರಿಯಲ್ಲಿವೆ ಎಂದು ಅವರು ಹೇಳಿದರು.