
2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿತು ಆದರೆ ಕಾಂಗ್ರೆಸ್ ಪಾಳ್ಯದಲ್ಲಿ ಮೊದಲಿಂದಲೂ ಕೂಡ ಹೆಚ್ಚುವರಿ ಡಿಸಿಎಂ ಬೇಡಿಕೆಗಳು ಕೇಳಿ ಬರುತ್ತಿತ್ತು. ಈ ಬಾರಿಯ ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಕಾಂಗ್ರೆಸ್ ನಲ್ಲಿ ಮತ್ತೆ ಹೆಚ್ಚುವರಿ ಡಿಸಿಎಂ ಬೇಡಿಕೆ ಮುನ್ನಲೆಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಇರುವವರೇ ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ವಿಷಯವನ್ನು ಮತ್ತೆ ಪ್ರಸ್ತಾಪಿಸುತ್ತಿದ್ದಾರೆ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷ ಬಿಜೆಪಿಗೆ ಸಾಕಷ್ಟು ಅವಕಾಶ ಮಾಡಿ ಕೊಡುತ್ತಿದ್ದಾರೆ.
ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿದರೆ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಇದರ ಜೊತೆಗೆ ಅವರು ವಿವಿಧ ಸಮುದಾಯದ ಮೂವರು ನಾಯಕರಿಗೆ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬೇಡಿಕೆಯನ್ನು ಮುಂದಿರಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಸ್ಥಾನ ನೀಡುವುದರಿಂದ ಸಮುದಾಯದವಾರು ಮತ ಸೆಳೆಯಲು ಅವಕಾಶ ಆಗಲಿದೆ ಎಂಬುವುದು ಕಾಂಗ್ರೆಸ್ ಒಂದು ಬಣದ ವಾದ. ಲೋಕಸಭೆ ಚುನಾವಣೆಗೂ ಮುನ್ನ ಈ ಬೇಡಿಕೆ ಇಡಲಾಗಿತ್ತು. ದಲಿತ, ಮುಸ್ಲಿಂ, ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ಆದರೆ, ಇದಕ್ಕೆ ಡಿಕೆಶಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು.
ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಲ್ಲಿ ಡಿಸಿಎಂ ಹುದ್ದೆಯ ಪೈಪೋಟಿ ಜೋರಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುವ ಭರವಸೆ ಇಟ್ಟಿತ್ತು ಆದರೆ ರಾಜ್ಯದಲ್ಲಿ ಕಾಂಗ್ರೆಸ್ 9 ಸ್ಥಾನವನ್ನು ಗೆದ್ದಿದೆ ಇದರಿಂದ ಕೈ ನಾಯಕರ ಮಧ್ಯ ಅಸಮಾಧಾನವೂ ಕೂಡ ಉಂಟಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೇ, ನಿಮ್ಮ ಕುರ್ಚಿಯ ಪೈಪೋಟಿ ಯಾವಾಗ ನಿಲ್ಲುತ್ತದೆ ಹೇಳಿ?, ಕರ್ನಾಟಕದ ಅಭಿವೃದ್ಧಿಯ ಗ್ರಹಣ ಯಾವಾಗ ಕೊನೆಗೊಳ್ಳುತ್ತದೆ ಎಂದು ರಾಜ್ಯ ಬಿಜೆಪಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದೆ.
ಲೋಕಸಭೆ ಚುನಾವಣೆಗೂ ಮುನ್ನ ಈ ವಿಷಯ ಪ್ರಸ್ತಾಪಿಸಿದ ರಾಜಣ್ಣ, ಕಾಂಗ್ರೆಸ್ ಹೈಕಮಾಂಡ್ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಈಗಿನ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಇನ್ನೂ ಮೂವರು ಡಿಸಿಎಂಗಳನ್ನು ನೇಮಿಸಬೇಕು ಎಂದಿದ್ದರು.
ಈಗಾಗಲೇ ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟವರು
ಎಂಬಿ ಪಾಟೀಲ್ – ಲಿಂಗಾಯತ
ಜಮೀರ್ ಅಹ್ಮದ್ – ಮುಸ್ಲಿಂ
ಡಾ. ಜಿ ಪರಮೇಶ್ವರ್ – ಎಸ್ ಸಿ
ಸತೀಶ್ ಜಾರಕಿಹೊಳಿ – ಎಸ್ಟಿ
ಡಿಸಿಎಂ ಬೇಡಿಕೆ ತೀವ್ರಗತಿಯನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಿತ್ತು. ಯಾರೂ ಹೇಳಿಕೆ ನೀಡದಂತೆ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಡಿಸಿಎಂ ಸ್ಥಾನದ ಬೇಡಿಕೆಯ ಬಗ್ಗೆ ಬಹಿರಂಗ ಹೇಳಿಕೆ ತಣ್ಣಗಾಗಿತ್ತು.
ಈಗ ರಾಜಣ್ಣ ಮತ್ತೆ ಇದೇ ವಿಷಯದ ಮೇಲೆ ಚರ್ಚೆ ಮಾಡುತ್ತಿರುವುದರಿಂದ ಇನ್ನೊಂದು ಸುತ್ತಿನ ಎಚ್ಚರಿಕೆ ಕೂಡ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ