
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧ ದೇವಾಲಯಗಳು ಇದೆ,ಅಲ್ಲಿನ ಪ್ರಸಿದ್ಧ ದೇವಾಲಯಗಳ ಪಟ್ಟಿಯಲ್ಲಿ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದಲ್ಲಿರುವ ಕಾರಿಂಜ ಕ್ಷೇತ್ರವೂ ಸೇರಿಕೊಂಡಿದೆ.
ಹಚ್ಚ ಹಸಿರಿನ ಕಾನನ ನಡುವೆ ಪ್ರಕೃತಿ ಸೌಂದರ್ಯ ಎದ್ದು ಕಾಣುವಂತೆ ಮನೋಹರ ವಾದಂತಹ ದೇವಾಲಯ ಮಹತೋಭಾರ ಶ್ರೀ ಕಾರಂಜಿೇಶ್ವರ ದೇವಾಲಯ.
ಬಹಳ ಸುಂದರವಾದ ಸ್ಥಳದಲ್ಲಿ ಈ ದೇವಾಲಯವಿದ್ದು ಚಾರಣ ಮಾಡುವವರಿಗೆ ಅದ್ಭುತವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಅಂದಾಜು 1500 ಅಡಿ ಎತ್ತರದಲ್ಲಿದೆ.
ಶಿವನಿಗೂ ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತ ತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ.
ಶಿವರಾತ್ರಿ ಇಲ್ಲಿ ಪ್ರಧಾನ ಉತ್ಸವ ನಾಲ್ಕು ದಿನ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನ್ನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ.
ಕಾರಂಜಿಯಲ್ಲಿರುವ ಕೊಳದ ವಿಶೇಷವೇನು.

ಕಾರಂಜಿ ಬೆಟ್ಟ ಏರುವ ಮೊದಲು ಗಧೆಯ ಆಕಾರದ ಒಂದು ಕೊಳವು ನಿಮಗೆ ಕಾಣಸಿಗುತ್ತದೆ. ಇದಕ್ಕೂ ಸಹ ಒಂದು ಹಿನ್ನೆಲೆಯಿದೆ. ಅದೆನೆಂದರೆ ಹಿಂದೆ ದ್ವಾಪರ ಯುಗದಲ್ಲಿ ಪಾಂಡವರು ವನವಾಸ ಅನುಭವಿಸುತ್ತಿದ್ದಾಗ ಈ ಸ್ಥಳದಲ್ಲಿ ಕೆಲ ಕಾಲ ತಂಗಿದ್ದರಂತೆ. ತಮಗೆ ಬೇಕಾದ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಭೀಮನು ತನ್ನ ಗಧೆಯಿಂದಲೆ ಈ ಕೊಳ ನಿರ್ಮಿಸಿದ್ದಾನೆಂಬ ಪ್ರತೀಯಿದೆ.
ಹಾಗಾಗಿ ಈ ಕೆರೆಯನ್ನು ಗದಾ ತೀರ್ಥವೆಂದು ಕರೆಯಲಾಗುತ್ತದೆ. ಶಿವ ದೇವಾಲಯವಿರುವ ಬೆಟ್ಟದ ಮೇಲೆ ಭೀಮನ ಹೆಬ್ಬೆರಳಿನಿಂದ ಉಂಟಾದ ‘ಅಂಗುಷ್ಠ ತೀರ್ಥ’, ನೆಲದ ಮೇಲೆ ಮಂಡಿಯೂರಿದಾಗ ಉಂಟಾದ ‘ಜಾನುತೀರ್ಥ’ ಎನ್ನುವ ಪುಟ್ಟ ಕೊಳಗಳೂ ಇಲ್ಲಿದೆ.
ಕಾರಿಂಜೇಶ್ವರ ದೇವಾಲಯದ ಸ್ಥಳ ಪುರಾಣ ಹಾಗೂ ಇತಿಹಾಸ

ಕಾರಂಜಿೇಶ್ವರ ದೇವಾಲಯ ಈ ದೇವಾಲಯವು ಸಾಕಷ್ಟು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ,ನಾಲ್ಕು ಯುಗಗಳಿಗೆ ಸಾಕ್ಷಿಯಾಗಿರುವ ದೇವಾಲಯ. ಮತ್ತು ಕಾರಿಂಜೇಶ್ವರ ದೇವಸ್ಥಾನ ನಾಲ್ಕು ಯುಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಈ ದೇವಾಲಯವನ್ನು ಕೃತ ಯುಗದ ಸಮಯದಲ್ಲಿ ರೌದ್ರ ಗಿರಿ, ದ್ವಾಪರಯುಗದಲ್ಲಿ ಭೀಮಾ ಶೈಲಾ, ತ್ರೇತಾ ಯುಗದಲ್ಲಿ ಗಜೇಂದ್ರ ಗಿರಿ, ಮತ್ತು ಕಲಿಯುಗದಲ್ಲಿ ಕಾರಿಂಜ ಎಂದು ಕರೆಯಲಾಗುತ್ತಿದೆ . ಇದು ನಾಲ್ಕು ಪ್ರಮುಖ ಯುಗಗಳಿಗೆ ಸಾಕ್ಷಿಯಾಗಿರುವ ಒಂದು ದೇವಾಲಯವಾಗಿದೆ.
ಸುಮಾರು 800 ವರ್ಷಗಳ ಹಿಂದೆ ಸನಾತನ ಧರ್ಮದ ಪ್ರಚಾರಕ್ಕಾಗಿ ಇಬ್ಬರು ಬ್ರಾಹ್ಮಣ ಸಹೋದರರು ಉತ್ತರ ಕನ್ನಡ ಭಾಗದಿಂದ ತುಳುನಾಡಿನತ್ತ ಬರುತ್ತಾರೆ ಅವರ ಹೆಸರು ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಆಗಿನ ಕಾಲದಲ್ಲಿ ತುಳುನಾಡು ರಾಜರ ಆಡಳಿತಕ್ಕೆ ಒಳಪಟ್ಟಿತ್ತು, ಭೂತಾರಾಧನೆ ದೈವರಾದನೆ ಇಲ್ಲಿನ ಜನರ ಮುಖ್ಯ ಆಚರಣೆ ಆಗಿತ್ತು. ಯಾವ ಜಾಗದಲ್ಲಿ ಇಚ್ಳತ್ತಾಯ ನೆಲೆಯಾದನು ಆ ಪ್ರದೇಶ ಇಚ್ಲಂಪಾಡಿ ಎಂದು ಪ್ರಸಿದ್ಧಿಯಾಯಿತು ಹಾಗೂ ಎಲ್ಲಿ ಕಾರಿಂಜತ್ತಾಯ ನೆಲೆಯಾದನು ಆ ಜಾಗ ಕಾರಿಂಜ ಎಂದು ಪ್ರಸಿದ್ದಿಯಾಯಿತು. ಕಾರಿಂಜ ಮತ್ತು ಇಚ್ಲಂಪಾಡಿ ನಡುವೆ ಸುಂದರ ಪ್ರಕೃತಿ ದ್ರಶ್ಯ ಅಲ್ಲಿ ಒಂದು ಸುಂದರವಾದ ಶಿವ ದೇವಸ್ಥಾನ ನಿರ್ಮಾಣವಾಯಿತು. ಈ ಕ್ಷೇತ್ರ ಕಾರಿಂಜೇಶ್ವರ ಎಂದು ಪ್ರಸಿದ್ಧಿಯಾಯಿತು.
ಕಾರಂಜಿ ಒಂದು ರೀತಿ ಕಪಿಗಳಿಗೆ ಆಶ್ರಯ ತಾಣ ಎಂದು ಹೇಳಬಹುದು.
ಇಲ್ಲಿ ಕಾರಿಂಜೇಶ್ವರನಿಗೆ ಮಾಡಿದ ನೈವೇದ್ಯ ಶ್ರೀರಾಮನ ಸೈನಿಕರಾದ ವಾನರರಿಗೆ ಅರ್ಪಿತವಾಗುತ್ತದೆ. ಅಲ್ಲದೆ ಇಲ್ಲಿನ ವಾನರರಿಗೆ ಆಹಾರ ನೀಡುವುದಾಗಿ ಹರಕೆ ಹೇಳಿಕೊಂಡರೆ ಕೋತಿಗಳ ಉಪದ್ರವ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಪ್ರತಿದಿನ ಮಧ್ಯಾಹ್ನ ದೇವರಿಗೆ ಪೂಜೆಯಾದ ನೈವೇದ್ಯವನ್ನು ಅಲ್ಲಿಯೇ ಇರುವ ಒಂದು ಕಲ್ಲಿನ ಮೇಲೆ ಇಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ನೂರಾರು ಕಪಿಗಳು ಬಂದು ನೈವೇದ್ಯ ಸ್ವೀಕರಿಸುತ್ತವೆ.