
ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆ ಮುಗೀತು ಎನ್ ಡಿ ಎ ಸರಕಾರ ರಚಿಸಿದ ನಂತರ ಮೊದಲ ಅಧಿವೇಶನ ನಡೆಯುತ್ತಿದೆ,18ನೇ ಲೋಕಸಭಾ ಅಧಿವೇಶನ ದಲ್ಲಿ ಇಂದು ಸಭಾಧ್ಯಕ್ಷರ ಪೀಠದ ಬಳಿ ಇರುವ ಸೆಂಗೋಲ್ ರಾಜದಂಡ ವಿಚಾರ ಚರ್ಚೆಗೆ ಗ್ರಾಸವಾಯಿತು. ನರೇಂದ್ರ ಮೋದಿ 2ನೇ ಅವಧಿಯಲ್ಲಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಉದ್ಘಾಟನೆಗೊಂಡಿದ್ದ ಹೊಸ ಸಂಸತ್ ಭವನದಲ್ಲಿ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ಸೆಂಗೋಲ್ ಅನ್ನು ಇಡಲಾಗಿತ್ತು. ಲೋಕಸಭೆಯಲ್ಲಿ ಸಭಾಪತಿಯವರ ಮುಂದೆ ಇರಿಸಲಾಗಿರುವ ಈ ಸೆಂಗೋಲ್ ಬಗ್ಗೆ ಹಿಂದಿನಿಂದಲೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು.

ಸಮಾಜವಾದಿ ಪಕ್ಷದ ಸಂಸದ ಆರ್.ಕೆ. ಚೌಧರಿ ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸೆಂಗೋಲ್ ಬದಲಾಗಿ ಸಂವಿಧಾನದ ಪ್ರತಿಯನ್ನು ಇಡುವಂತೆ ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದಲ್ಲಿ 37 ಸೀಟುಗಳನ್ನು ಗೆದ್ದಿರುವ ಸಮಾಜವಾದಿ ಪಕ್ಷವು ಇದೀಗ ಲೋಕಸಭೆಯಲ್ಲಿ 3ನೇ ಅತಿದೊಡ್ಡ ಪಕ್ಷವಾಗಿದೆ.
ಸಂವಿಧಾನದ ಅಂಗೀಕಾರವು ದೇಶದಲ್ಲಿ ಪ್ರಜಾಪ್ರಭುತ್ವದ ಆರಂಭವನ್ನು ಗುರುತಿಸಿತು ಮತ್ತು ಸಂವಿಧಾನವು ಅದರ ಸಂಕೇತವಾಗಿದೆ. ಬಿಜೆಪಿ ಸರ್ಕಾರ ತನ್ನ ಕೊನೆಯ ಅವಧಿಯಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ‘ಸೆಂಗೊಲ್’ ಅನ್ನು ಸ್ಥಾಪಿಸಿತು. ಸೆಂಗೋಲ್ ಎಂಬುದು ತಮಿಳು ಪದವಾಗಿದ್ದು, ಇದರ ಅರ್ಥ ರಾಜದಂಡ. ರಾಜದಂಡ ಎಂದರೆ ರಾಜನ ಕೋಲು ಎಂದೂ ಅರ್ಥ. ರಾಜಕಾಲದ ನಂತರ ನಾವು ಸ್ವತಂತ್ರರಾಗಿದ್ದೇವೆ. ಈಗ, ಅರ್ಹ ಮತದಾರರಾಗಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಈ ದೇಶವನ್ನು ನಡೆಸಲು ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಹಾಗಾದರೆ ದೇಶವು ಸಂವಿಧಾನದಿಂದ ನಡೆಯುತ್ತದೋ? ಅಥವಾ ರಾಜದಂಡದಿಂದ ನಡೆಸಲ್ಪಡುತ್ತದೆಯೇ? ‘ಸೆಂಗೊಲ್’ ಬದಲಿಗೆ ಪ್ರಜಾಪ್ರಭುತ್ವವನ್ನು ಉಳಿಸಲು ಸಂವಿಧಾನದ ಪ್ರತಿಯನ್ನು ಇರಿಸಬೇಕೆಂದು ಒತ್ತಾಯಿಸಿದರು.
ಈ ಸೆಂಗೋಲ್ ಅನ್ನು ಸ್ಥಾಪಿಸುವಾಗ ಪ್ರಧಾನಿ ಮೋದಿ ತಲೆಬಾಗಿ ನಮಸ್ಕರಿಸಿದ್ದರು. ಆದರೆ ಈ ಬಾರಿ ಪ್ರಮಾಣ ವಚನ ಸ್ವೀಕರಿಸುವಾಗ ಅದಕ್ಕೆ ನಮಸ್ಕರಿಸುವುದನ್ನು ಮರೆತಿದ್ದಾರೆ. ನಾವೇ ಇದೀಗ ಅವರಿಗೆ ಇದನ್ನು ನೆನಪಿಸಬೇಕಾಗಿದೆ ಎಂದು ಚೌಧರಿ ಕುಟುಕಿದರು. ಚೌಧರಿ ಬೇಡಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡ ಮಾಣಿಕ್ಯಂ, ಆರ್ಜೆಡಿ ಸಂಸದರು ಹಾಗೂ ಲಾಲೂ ಪ್ರಸಾದ್ ಪುತ್ರಿ ಮೀಸಾ ಭಾರತಿ ಬೆಂಬಲ ಸೂಚಿಸಿದ್ದಾರೆ.
ಬಿಜೆಪಿ ತಿರುಗೇಟು
ಪ್ರತಿಪಕ್ಷಗಳ ಆರೋಪಕ್ಕೆ ಬಿಜೆಪಿ ಸೇರಿದಂತೆ ಎನ್ಡಿಎ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಸಮಾಜವಾದಿ ಪಕ್ಷವು ಮೊದಲು ರಾಮಚರಿತಮಾನಸ್ ಮತ್ತು ಈಗ ಭಾರತೀಯ ಸಂಸ್ಕೃತಿಯ ಭಾಗವಾಗಿರುವ ಮತ್ತು ವಿಶೇಷವಾಗಿ ತಮಿಳು ಸಂಸ್ಕೃತಿಯ ಭಾಗವಾಗಿರುವ ಸೆಂಗೋಲ್ ಮೇಲೆ ದಾಳಿ ಮತ್ತು ನಿಂದನೆ ಮಾಡಿದೆ. ಸೆಂಗೋಲ್ನ ಈ ಅವಮಾನವನ್ನು ಅವರು ಬೆಂಬಲಿಸುತ್ತಾರೆಯೇ ಎಂಬುದನ್ನು ಡಿಎಂಕೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ
ಇದು ರಾಜಪ್ರಭುತ್ವದ ಸಂಕೇತವಾಗಿದ್ದರೆ ಮೊದಲ ಪ್ರಧಾನಿ ನೆಹರು ಅವರು ಏಕೆ ಇದನ್ನು ಒಪ್ಪಿಕೊಂಡರು ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಹೇಳಿದ್ದಾರೆ. .