
ಹುಬ್ಬಳ್ಳಿ – ಭಾರತ ಹಿಂದೂ ರಾಷ್ಟ್ರವಲ್ಲ ಎಂಬ ನೋಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ…!
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಲ್ಹಾದ್ ಜೋಶಿ, ಹಿಂದೂಗಳು ಬಹುಸಂಖ್ಯಾತರಾಗಿರುವ ಕಾರಣ ಭಾರತ ಇಂದು ಜಾತ್ಯತೀತ ರಾಷ್ಟ್ರವಾಗಿದೆ, ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಎಂದಿಗೂ ಜಾತ್ಯಾತೀತ ರಾಷ್ಟ್ರವಾಗುವುದಿಲ್ಲ, ಇದನ್ನು ಮೊದಲು ಸಿಎಂ ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು…!!
ಅಮರ್ತ್ಯ ಸೇನ್ ಹೇಳಿದ್ದೇನು…?
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು, ಈ ಚುನಾವಣೆಯು ಭಾರತವು ಹಿಂದ೬ ರಾಷ್ಟ್ರವಲ್ಲ, ಅದು ಜಾತ್ಯತೀತ ಹಾಗೂ ಸರ್ವ ಧರ್ಮಗಳ ರಾಷ್ಟ್ರವೆಂಬುದನ್ನು ಸಾಬೀತುಪಡಿಸಿದೆ, ಮುಂದೆಯೂ ಭಾರತವನ್ನು ಸಂಪೂರ್ಣವಾಗಿ ಹಿಂದುರಾಷ್ಟ್ರವನ್ನಾಗಿ ಪರಿವರ್ತಿಸಲು ಸಾಧ್ಯವಿಲ್ಲ, ಇಲ್ಲಿ ಹಿಂದೂ ಧರ್ಮ ಪ್ರಧಾನವಾಗಿ ಇರುತ್ತದೆ, ಆದರೆ, ಉಳಿದ ಧರ್ಮಗಳೂ ಜತೆಯಲ್ಲಿ ಅಸ್ತಿತ್ವದಲ್ಲಿರುತ್ತವೆ ಎಂದು ಹೇಳಿದ್ದರು…!
ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿರುವುದು ಸರಿಯಿದೆ, ನಾವೂ ಅದನ್ನೇ ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದೇವೆ ಎಂದಿದ್ದರು…!!