
ಶ್ರೀರಾಮ ಎಂದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಏನೋ ಒಂದು ರೀತಿಯ ಆನಂದ.
ಶ್ರೀರಾಮ ಭಗವಾನ್ ಮಹಾವಿಷ್ಣುವಿನ 7ನೇ ಅವತಾರ.
ಹಿಂದೂ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ದಶರಥ ನಂದನ “ಶ್ರೀ ರಾಮ” ಜನಿಸಿದ ದಿನವನ್ನು ಶ್ರೀರಾಮ ನವಮಿ ಎಂದು ಆಚರಣೆ ಮಾಡಲಾಗುತ್ತದೆ…!
ರಾಮನವಮಿ ಸಕಲ ಹಿಂದೂ ಧರ್ಮ ಬಾಂಧವರಿಗೆ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ
ಹಿಂದೂ ಸಂಪ್ರದಾಯದಲ್ಲಿ ಶ್ರೀ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ, ರಾಮನವಮಿ ಹಬ್ಬವನ್ನು ಚೈತ್ರ ಮಾಸದ 9ನೇ ದಿನದಂದು ಆಚರಣೆ ಮಾಡಲಾಗುತ್ತದೆ
ರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ, ಹಬ್ಬದ ದಿನದಂದು ರಾಮನ ಭಜನೆ, ನಾಮಸ್ಮರಣೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ, ರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ, ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ರಾಮನವಮಿ ಆರಂಭವಾಗುತ್ತದೆ
ರಾಮನವಮಿಯ ಇತಿಹಾಸ
ಹಿಂದೂ ಧರ್ಮಗ್ರಂಥಗಳ ಪ್ರಕಾರ, ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು, ಆದರೆ ಅವನಿಗೆ ಮಕ್ಕಳಿರಲಿಲ್ಲ, ಆದ್ದರಿಂದ ರಾಜ ದಶರಥನು ಮಹಾ ಋಷಿ ವಸಿಷ್ಠರ ಸಲಹೆ ಮೇರೆಗೆ ಪುತ್ರ ಪ್ರಾಪ್ತಿಗಾಗಿ ಅಶ್ವಮೇಧ ಯಾಗವನ್ನು ನಡೆಸಿದನು, ಬಳಿಕ ಅವರು ಆಶೀರ್ವದಿಸಿದ ಪಾಯಸವನ್ನು ಅವನ ಹೆಂಡತಿಯರಿಗೆ ಕೊಡಲು ಹೇಳಿದರು, ಬಳಿಕ ದಶರಥನ ಹೆಂಡತಿಯರು 4 ಗಂಡು ಮಕ್ಕಳ ತಾಯಿಯಾದರು. ಅದರಲ್ಲಿ ಮೊದಲನೇಯವನು ರಾಮ. ಕೌಸಲ್ಯಾ ಚೈತ್ರ ಮಾಸದ ಒಂಬತ್ತನೇ ದಿನದಂದು ಭಗವಾನ್ ರಾಮನಿಗೆ ಜನ್ಮ ನೀಡಿದಳು. ಸುಮಿತ್ರಾ ಶತ್ರುಘ್ನ ಮತ್ತು ಲಕ್ಷ್ಮಣನಿಗೆ ಜನ್ಮ ನೀಡಿದಳು, ಕೈಕೇಯಿ ಭರತನಿಗೆ ಜನ್ಮ ನೀಡಿದಳು. ಅಂದಿನಿಂದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಬಹಳ ವೈಭವದಿಂದ ಆಚರಿಸುತ್ತಾರೆ
ಆಚರಿಸುವ ಪದ್ಧತಿ
ಅನೇಕ ರಾಮ ಮಂದಿರಗಳಲ್ಲಿ ಚೈತ್ರ ಶುಕ್ಲ ಪ್ರತಿ ಪದೆಯಿಂದ ಒಂಭತ್ತು ದಿನಗಳ ಕಾಲ ಈ ಉತ್ಸವವು ನಡೆಯುತ್ತದೆ. ರಾಮಾಯಣದ ಪಾರಾಯಣ, ಹರಿಕಥೆ ಮತ್ತು ರಾಮನ ಮೂರ್ತಿಗೆ ವಿವಿಧ ಶೃಂಗಾರ ಮುಂತಾದವುಗಳೊಂದಿಗೆ ಈ ಉತ್ಸವವನ್ನು ಆಚರಿಸುತ್ತಾರೆ. ನವಮಿಯಂದು ಮಧ್ಯಾಹ್ನ ರಾಮಜನ್ಮದ ಕೀರ್ತನೆ (ಹರಿಕಥೆ) ಯಾಗುತ್ತದೆ. ಮಧ್ಯಾಹ್ನ ಕುಂಚಿಗೆ (ಮಗುವಿನ ತಲೆಗೆ ಕಟ್ಟುವ ಒಂದು ವಸ್ತ್ರ. ಈ ವಸ್ತ್ರವು ಬೆನ್ನಿನವರೆಗೆ ಇರುತ್ತದೆ.) ಹಾಕಿದ ತೆಂಗಿನಕಾಯಿಯನ್ನು ತೊಟ್ಟಿಲಿನಲ್ಲಿಟ್ಟು ತೂಗುತ್ತಾರೆ. ಭಕ್ತರು ಅದರ ಮೇಲೆ, ಗುಲಾಲು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.” (ಕೆಲವು ಕಡೆಗಳಲ್ಲಿ ತೆಂಗಿನ ಕಾಯಿಯ ಬದಲು ಶ್ರೀರಾಮನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಇಡುತ್ತಾರೆ. ) ಈ ಸಂದರ್ಭದಲ್ಲಿ ಶ್ರೀರಾಮನ ಜನ್ಮದ ಗೀತೆಯನ್ನು ಹೇಳಲಾಗುತ್ತದೆ. ಅದರ ಅನಂತರ ಶ್ರೀರಾಮನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಪ್ರಸಾದವೆಂದು ಶುಂಠಿ ಚೂರ್ಣವನ್ನು ಕೊಡುತ್ತಾರೆ. ಕೆಲವು ಕಡೆಗಳಲ್ಲಿ ಶುಂಠಿ ಚೂರ್ಣದೊಂದಿಗೆ ಮಹಾ ಪ್ರಸಾದವನ್ನೂ ನೀಡುತ್ತಾರೆ.