
ಉಡುಪಿ, ಮಂಗಳೂರು – ಆಷಾಢ ಅಮಾವಾಸ್ಯೆ ಅಥವಾ ಆಟಿ ಅಮಾವಾಸ್ಯೆ ಎಂದರೆ ಕರಾವಳಿಯಲ್ಲಿ ವಾಸಿಸುತ್ತಿರುವ ತುಳುವರ ಪಾಲಿಗೆ ಬಹಳ ಮಹತ್ವವಾದ ದಿನ…!
ಈ ದಿನ ಮುಂಜಾನೆ ಬೇಗನೆ ಎದ್ದು, ಹಾಲೆ ಮರದ ತೊಗಟೆಯ ಕಹಿಯಾದ ಕಷಾಯ ಕುಡಿಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ…!!
ಆದರೆ ಈ ಕಷಾಯವನ್ನು ಯಾಕೆ ಕುಡಿಯುತ್ತಾರೆ…? ಇದಕ್ಕೊಂದು ಹಿನ್ನೆಲೆ ಉಂಟು…!
ಆಟಿ ಎಂದು ಕರೆಯಲ್ಪಡುವ ಆಷಾಢ ಮಾಸದಲ್ಲಿ ವಿಪರೀತ ಮಳೆಯಾಗುವುದರಿಂದ ಮತ್ತು ಮಳೆ ಎಂದ ಮೇಲೆ ಕೇಳಬೇಕೇ…? ಮಳೆಯ ಜೊತೆಗೆ ಸಾಂಕ್ರಾಮಿಕ ರೋಗ, ರುಜಿನಗಳ ಕಾಟವೂ ಸಹಜ, ಹಾಗಾಗಿ ರೋಗಗಳು ಬಾಧಿಸದೇ ಇರಲಿ ಎಂದು ತುಳುವರು ಹಾಲೆ ಮರದ ತೊಗಟೆಯ ಕಷಾಯ ಮಾಡಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾರೆ…!!
ತಾವೂ ಕುಡಿದು ನೆರೆ ಹೊರೆಯವರಿಗೂ ಕಷಾಯ ಹಂಚುವುದು ತುಳುನಾಡಿನಲ್ಲಿ ಇರುವ ಪದ್ಧತಿ…!
ಹೀಗಾಗಿ ಇಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಜನರು ಮುಂಜಾನೆ ಬೇಗನೆ ಎದ್ದು ಹಾಲೆ ಮರದ ಕಷಾಯ ಸೇವಿಸುತ್ತಾರೆ…!
ಅತ್ಯಂತ ಕಹಿಯಾದ ಈ ಕಷಾಯ ಹಲವಾರು ರೋಗಗಳಿಗೆ ಔಷಧವೂ ಹೌದು…!!
ಕಷಾಯ ತಯಾರಿ ಹೇಗೆ…?
ಆಟಿ ಅಮಾವಾಸ್ಯೆಯ ದಿನದಂದು ಬ್ರಾಹ್ಮೀ ಮುಹೂರ್ತದಲ್ಲಿ ‘ಸಪ್ತಪರ್ಣಿ’ ವೃಕ್ಷದ(ತುಳುವಿನಲ್ಲಿ ಪಾಲೆ ಮರ) ತೊಗಟೆ ತಂದು ಕಲ್ಲಿನಿಂದ ಜಜ್ಜಿ ತೆಗೆದ ರಸವನ್ನು ಸೇವಿಸುವ ಪದ್ಧತಿ ತುಳುನಾಡಿನಲ್ಲಿದೆ…!
ಹಿಂದಿನ ಕಾಲದಲ್ಲಿ ಬೆತ್ತಲಾಗಿ ಹೋಗಿ ಸೂರ್ಯ ಹುಟ್ಟುವ ಮುನ್ನ ತೊಗಟೆ ತರುತ್ತಿದ್ದರಂತೆ…!!
ಆದರೆ, ಈಗ ಹಾಗಿಲ್ಲ, ತೊಗಟೆ ತಂದ ನಂತರ ಜಜ್ಜಿ ರಸ ತೆಗೆದು, ಕಾಳು ಮೆಣಸು, ಓಂ ಕಾಳು, ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ ಅರಿಶಿಣ ಸೇರಿಸಿ ಕಷಾಯ ಮಾಡಿ ಸೇವಿಸಲಾಗುತ್ತದೆ…!
ಕಹಿ ಒಗರಾದ ಈ ಕಷಾಯದೊಂದಿಗೆ ಬೆಲ್ಲವನ್ನೋ ಅಥವಾ ಸುಟ್ಟ ಗೇರು ಬೀಜವನ್ನೋ ಸೇವಿಸಲಾಗುತ್ತದೆ…!!
ಅಲ್ಲದೇ, ಅಂದು ಮೆಂತೆ ಗಂಜಿಯನ್ನೂ ಮಾಡಲಾಗುತ್ತದೆ…!
ಆರೋಗ್ಯಕ್ಕೆ ಉತ್ತಮ ಈ ಕಷಾಯ
ಹಿಂದಿನ ಕಾಲದಲ್ಲಿ ಮನೆಮದ್ದಿಗೆ ಹೆಚ್ಚಿನ ಪ್ರಾಶಸ್ತ್ಯ ಇತ್ತು. ಮನೆಯ ಸುತ್ತ ಮುತ್ತಲು ಸಿಗುವ ಔಷಧೀಯ ಗುಣಗಳನ್ನು ಒಳಗೊಂಡಿರುವ ಸಸ್ಯ ಸಂಕುಲಗಳಿಂದಲೇ ಔಷಧೀಯ ಗುಣಗಳನ್ನು ಕಂಡುಕೊಂಡು ಪರಿಹಾರ ಪಡೆಯುತ್ತಿದ್ದರು…!
ಅದರಲ್ಲಿ ಈ ಆಟಿ ಅಮಾವಾಸ್ಯೆಯಂದು ಕುಡಿಯುವ ಕಷಾಯವೂ ಒಂದು ಎನ್ನಬಹುದು…!!
ಈ ಕಷಾಯವು ರೋಗ ನಿರೋಧಕ ಹಾಗೂ ನಂಜು ನಿವಾರಕ ಶಕ್ತಿಯನ್ನು ಹೊಂದಿದೆ...!
ಜ್ಯೇಷ್ಠ ಆಷಾಢ ಮಾಸಗಳ ಶೀತ, ಜ್ವರಗಳ ಸಮಸ್ಯೆ, ನಂಜಿನ ಬಾಧೆಗಳ ನಿವಾರಣೆಯೂ ಆಗಲಿದೆ…!!
ಹೊಟ್ಟೆಯಲ್ಲಿನ ಲಾಡಿಹುಳ, ಜಂತುಹುಳುಗಳ ತೊಂದರೆ ನಿವಾರಣೆಯೂ ಆಗಲಿದೆ. ಹೊಟ್ಟೆ ನೋವು, ಅತಿಸಾರ, ವಾಂತಿ, ಮಲೇರಿಯಾ ಹೀಗೆ ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಿಂದ ರಕ್ಷಣೆಯನ್ನು ನೀಡುತ್ತದೆ…!
ಆಟಿ ಅಮಾವಾಸ್ಯೆಯ ಕಷಾಯ ಸೇವಿಸಿದ್ರೆ 366 ಬಗೆಯ ಔಷಧಗಳು ಶರೀರಕ್ಕೆ ವ್ಯಾಪಿಸಿದಂತೆ ಎಂಬುದು ತುಳುನಾಡಿನ ಜನರ ನಡುವೆ ನಂಬಿಕೆ…!!