
ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕನಿಷ್ಠ ಏಳು ಕಾಂಗ್ರೆಸ್ ಶಾಸಕರು ಪಕ್ಷದ ನಿರ್ದೇಶನವನ್ನು ಧಿಕ್ಕರಿಸಿ ಅಡ್ಡ ಮತದಾನ ಮಾಡಿದ್ದಾರೆ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕೆ ಭಾರೀ ಮುಖಬಭಂಗ ಆಗಿದೆ. ಬಿಜೆಪಿ ನೇತೃತ್ವದ ಎನ್ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಎನ್ಡಿಎ ಮೈತ್ರಿಕೂಟವು 11ರಲ್ಲಿ 9 ಸ್ಥಾನಗಳನ್ನು ಗೆದ್ದುಕೊಂಡಿದೆ.
ಪ್ರತಿ ಅಭ್ಯರ್ಥಿಯ ಗೆಲುವಿಗೆ ಮೊದಲ ಪ್ರಾಶಸ್ತ್ಯದ 23 ಮತಗಳು ಬೇಕಿದ್ದವು. ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಎಲ್ಲ 274 ಶಾಸಕರೂ ಮತ ಚಲಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ವಿಧಾನಪರಿಷತ್ನ 11 ಸದಸ್ಯರ ಅವಧಿ ಜುಲೈ 27ರಂದು ಕೊನೆಗೊಳ್ಳಲಿದ್ದು, ತೆರವಾಗಲಿರುವ ಸ್ಥಾನಗಳನ್ನು ತುಂಬಲು ಈ ದ್ವೈವಾರ್ಷಿಕ ಚುನಾವಣೆ ನಡೆದಿದೆ.
ಇಂಡಿಯಾ ಮೈತ್ರಿಕೂಟದ ಮೂವರಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಇಷ್ಟಕ್ಕೆಲ್ಲ ಕಾರಣ 7 ರಿಂದ 8 ಕಾಂಗ್ರೆಸ್ ಶಾಸಕರು ಅಡ್ಡಮತದಾನ ಮಾಡಿರೋದು ಎಂಬ ಮಾಹಿತಿ ಇದೆ. 11 ಸ್ಥಾನಗಳ ಪೈಕಿ ಬಿಜೆಪಿ 5, ಶಿವಸೇನೆಯ (ಸಿಂಧೆ ಬಣ), ಎನ್ಸಿಪಿ (ಅಜಿತ್ ಪವಾರ್ ಬಣ) ತಲಾ ಎರಡು ಸ್ಥಾನಗಳಿಗೆ ಸ್ಪರ್ಧೆ ಮಾಡಿತ್ತು. ಇಂಡಿಯಾ ಒಕ್ಕೂಟದಿಂದ ಶಿವಸೇನೆ (ಠಾಕ್ರೆ ಬಣ) ಮತ್ತು ಕಾಂಗ್ರೆಸ್ನಿಂದ ತಲಾ ಒಂದು ಸ್ಥಾನಗಳಿಗೆ ಹಾಗೂ ಶರದ್ ಪವಾರ್ ನೇತೃತ್ವದ ಎನ್ಸಿಪಿಯಿಂದ ಒಂದು ಸ್ಥಾನಕ್ಕಾಗಿ ನಿಲ್ಲಿಸಲಾಗಿತ್ತು. ಆದರೆ ಎನ್ಸಿಪಿಯಿಂದ ನಿಂತಿದ್ದ ಜಯಂತ್ ಪಾಟೀಲ್ ಚುನಾವಣೆಯಲ್ಲಿ ಸೋತಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗೆ 23 ಶಾಸಕ ಬೆಂಬಲ ಬೇಕಿತ್ತು. ಬಿಜೆಪಿ 103 ಶಾಸಕರು, ಶಿವಸೇನೆ 38, (ಶಿಂದೆ ಬಣ), 42 ಎನ್ಸಿಪಿ (ಅಜಿತ್ ಬಣ), ಕಾಂಗ್ರೆಸ್ನಿಂದ 37, ಶಿವಸೇನೆ 15 (ಠಾಕ್ರೆ), ಎನ್ಸಿಪಿ (ಶರದ್ ಪವಾರ್) 10 ಶಾಸಕರಿದ್ದಾರೆ. ಎನ್ಸಿಪಿಯಿಂದ ಸೋತಿರುವ ಜಯಂತ್ ಪಾಟೀಲ್ ಕೇವಲ 12 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು ಈ ಮೂಲಕ ಕಳೆದ ಲೋಕಸಭಾ ಚುನಾವಣೆಯ ಹಿನ್ನಡೆಯನ್ನು ಮೆಟ್ಟಿನಿಂತಿದ್ದಾರೆ. ಆದ್ರೆ ಇಂಡಿಯಾ ಕೂಟದ ಕಾಂಗ್ರೆಸ್ ಒಂದು ಸ್ಥಾನ ಪಡೆದರೆ, ಯುಬಿಟಿ ಸಹ ಒಂದೇ ಒಂದು ಸ್ಥಾನ ಪಡೆದು ತೀವ್ರ ಮುಖಭಂಗ ಅನುಭವಿಸಿದೆ.