
ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿ ಗೆಜೆಟ್ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ರೀಟೆಲ್ ಸೇಲ್ಸ್ ಟ್ಯಾಕ್ಸ್ ದರವನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ರಾಜ್ಯ ಸರಕಾರ ಬರಗಾಲದ ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ತೈಲ ಬೆಲೆ ಏರಿಕೆಯ ಹೊರೆ ಹಾಕಿರುವುದು ಅಕ್ಷಮ್ಯ ಅಪರಾಧ. ಸಿಎಂ ತಮ್ಮ ಭಂಡತನವನ್ನು ಬಿಟ್ಟು ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಜೂ.17ರಂದು ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ, ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಹೆಚ್ಚಳ ಮಾಡಿದ್ದು, ರಾಜ್ಯದಲ್ಲಿ ತೈಲ ಬೆಲೆ ಹೆಚ್ಚಳವಾಗಿದೆ.
ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಅಂದರೆ 4.1% ರಷ್ಟು ಏರಿಕೆ ಕಂಡಂತೆ ಆಗಿದೆ.
ರಾಜ್ಯ ಸರ್ಕಾರದ ತೆರಿಗೆ ಹೆಚ್ಚಳದ ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಲಿದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗುತ್ತಿದೆ.