
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಪುಷ್ಪಗಳು ಎಂದರೆ ದೈವಿಕ ಭಾವನೆಗಳು ಸಹಜವಾಗಿ ಎಲ್ಲರಲ್ಲಿಯೂ ಮೂಡುತ್ತದೆ , ಕೆಲವು ಪುಷ್ಪಗಳು ದೇವರಿಗೆ ಹಾಗೂ ದೇವರ ಪೂಜೆಗೆ ಬಳಸಿದರೆ ಇನ್ನೂ ಕೆಲವು ಪುಷ್ಪಗಳು ಅಲಂಕಾರಕ್ಕೆ ಬಳಸಲಾಗುತ್ತದೆ. ಪೂಜೆ ಪುನಸ್ಕಾರ ಧಾರ್ಮಿಕ ಕಾರ್ಯಕ್ರಮಗಳು ಪುಷ್ಪಗಳಿಲ್ಲದೆ ಸಮಪ್ತಿ ಆಗುವುದಿಲ್ಲ ಎನ್ನುವಂತ ನಂಬಿಕೆ ಹಿಂದೂ ಧರ್ಮದಲ್ಲಿ ಆಳವಾಗಿದೆ.
ಹಾಗೆ ಕೆಲವು ಹೂಗಳು ನಿತ್ಯ ನಮಗೆ ನೋಡಲು ಸಿಗುತ್ತದೆ ಆದರೆ ಇನ್ನೂ ಕೆಲವು ವಿಶೇಷವಾದಂತಹ ಪುಸ್ತಕಗಳು ಅಪರೂಪಕ್ಕೆ ಅಲ್ಲಲ್ಲಿ ನಮಗೆ ಕಾಣಲು ಸಿಗುತ್ತದೆ ಅಂತಹ ವಿಶೇಷವಾದ ಹೂ ಗಳಲ್ಲಿ ಬ್ರಹ್ಮ ಕಮಲವೂ ಕೂಡ ಒಂದು ಇದನ್ನ ದೈವಿಕ ಪುಷ್ಪ ಎಂದು ಕರೆಯುತ್ತಾರೆ.
ವರ್ಷಕ್ಕೆ ಒಂದು ಬಾರಿ ಮಾತ್ರ ಈ ಹೂಗಳು ಬಿಡುತ್ತದೆ ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಬ್ರಹ್ಮಕಮಲ ಗಿಡಗಳಲ್ಲಿ ಹೂಗಳು ಬಿಡಲಾರಂಭಿಸುತ್ತವೆ. ಆಷಾಢದಲ್ಲಂತೂ ಗಿಡಗಳು ಒಂದಕ್ಕಿಂತ ಮತ್ತೊಂದು, ತನ್ನ ಸಾಮಥ್ರ್ಯಕ್ಕಿಂತಲೂ ಹೆಚ್ಚಿನ ಹೂಗಳನ್ನು ಬಿಟ್ಟು ಮನೆಯಂಗಳದಲ್ಲಿ ಶೋಭಿಸುತ್ತವೆ.
ಇದು ಅರಳುವ ಪ್ರಕ್ರಿಯೆ ಬಲು ವಿಶಿಷ್ಟವಾಗಿದೆ. ಹೂವು ಅರಳಿದಾಗ ಅದನ್ನು ನೋಡುವವರ ಮನವೂ ಅರಳುತ್ತದೆ. ಎಲ್ಲಾ ಹೂವುಗಳು ಮೊಗ್ಗಿನ ಹಂತ ದಾಟಿ ಅರಳಲೇಬೇಕು. ಅರಳುವ ಹಂತವನ್ನು ಯಾರೂ ಅಷ್ಟು ಕುತೂಹಲವಾಗಿ ಗಮನಿಸುವುದಿಲ್ಲ. ಇದರ ವೈಶಿಷ್ಟತೆ ಎಂದರೆ ಸೂರ್ಯನ ಬೆಳಕಿನಲ್ಲಿ ಮೊಗ್ಗಾಗಿ ರಾತ್ರಿ ಚಂದ್ರ ಬೆಳಕಿನಲ್ಲಿ ಅರಳಿ ಬೆಳಗಾಗುವ ಮುಂಚೆಯೇ ಕಮರುತ್ತದೆ.
ಉತ್ತರ ಭಾರತದ ಹಿಮಾಲಯದ ತಪ್ಪಲಿನಲ್ಲಿ ಅತಿ ಹೆಚ್ಚಾಗಿ ಈ ಹೂಗಳು ಕಂಡುಬರುತ್ತದೆ
ಬ್ರಹ್ಮ ಕಮಲ ಎನ್ನುವಂತಹ ಹೆಸರು ಬಂದಿದ್ದು ಹೇಗೆ.?
ಬ್ರಹ್ಮ ಕಮಲವನ್ನು ನೋಡಿದಾಗ ಏನೋ ಒಂದು ರೀತಿಯ ಆಧ್ಯಾತ್ಮಿಕ ಚೈತನ್ಯಗಳು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುತ್ತದೆ, ಹಾಗಾದರೆ ಈ ಹೂವಿಗೆ ಬ್ರಹ್ಮ ಕಮಲ ಎನ್ನುವ ಹೆಸರು ಹೇಗೆ ಬಂದಿತು ಎನ್ನುವಂತಹ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಇರುತ್ತದೆ, ಪುರಾಣಗಳ ಪ್ರಕಾರ ಶ್ರೀ ಮಹಾ ವಿಷ್ಣುವಿನ ನಾದಕಮಲದಿಂದ ಬ್ರಹ್ಮದೇವರು ಹುಟ್ಟುತ್ತಾರೆ ಬ್ರಹ್ಮ ದೇವರು ಅದೇ ಕಮಲದ ಮೇಲೆ ಕುಳಿತುಕೊಂಡು ಜಗತ್ತಿನ ಸೃಷ್ಟಿಯನ್ನು ಮಾಡುತ್ತಾರೆ ಹಾಗೆ ಬ್ರಹ್ಮದೇವರು ಕಮಲದ ಮೇಲೆ ಕುಳಿತುಕೊಂಡಿರುತ್ತಾರೆ, ಹಾಗಾಗಿ ಈ ಪುಷ್ಪವನ್ನು ಬ್ರಹ್ಮ ಕಮಲ ಎಂದು ಕರೆಯಲಾಗುತ್ತದೆ,
ಇನ್ನೊಂದು ದಂತಕತೆಯ ಪ್ರಕಾರ ಪಾರ್ವತಿ ತನ್ನ ರಕ್ಷಣೆಗಾಗಿ ಗಣಪತಿಯನ್ನು ಸೃಷ್ಟಿಮಾಡುತ್ತಾಳೆ ಗಣಪತಿಗೆ ಜೀವಶಕ್ತಿಯನ್ನು ನೀಡುತ್ತಾಳೆ, ನಂತರ ಶಿವನು ಪಾರ್ವತಿಯ ಭೇಟಿಗಾಗಿ ಬಂದಾಗ ಗಣೇಶ ಶಿವನಿಗೆ ಅವಕಾಶ ನೀಡುವುದಿಲ್ಲ, ಶಿವನಿಗೆ ಕೋಪ ಬಂದು ಗಣೇಶನ ಶಿರಶ್ಚೇಧನ ಮಾಡುತ್ತಾನೆ,
ನಂತರ ಪಾರ್ವತಿ ದೇವಿ ಬಂದು ಗಣೇಶನನ್ನು ಬದುಕಿಸಿಕೊಡಿ ಎಂದು ಶಿವನಲ್ಲಿ ಮೊರೆ ಇಡುತ್ತಾಳೆ ಆಗ ಶಿವಗಣಗಳು ಹೋಗಿ ಆನೆ ತಲೆಯನ್ನು ಕಡಿದು ತರುತ್ತಾರೆ , ಆತನಿಗೆ ಆನೆಯ ತಲೆಯನ್ನು ಜೋಡಿಸಲು ಸಹಾಯ ಮಾಡಲು ಸ್ವತಃ ಬ್ರಹ್ಮನು ಬ್ರಹ್ಮ ಕಮಲವನ್ನು ತರುತ್ತಾನೆ ಈ ಹೂವಿನ ದಳಗಳಿಂದ ಹೊರತೆಗೆಯಲಾದ ಮಕರಂದವು ಗಣೇಶನಿಗೆ ಜೀವ ನೀಡಿತು ಎಂದು ಒಂದು ದಂತಕಥೆ ಹೇಳುತ್ತದೆ.

ಈ ಹೂವು ಭೂಮಿಗೆ ಹೇಗೆ ಬಂತು ಅನ್ನೋದರ ಬಗ್ಗೆ ಒಂದು ದಂತಕಥೆ ಇದೆ.
ರಾಮಾಯಣದಲ್ಲಿ ರಾಮ ಹಾಗೂ ರಾವಣನ ಮಗ ಮೇಘನಾದನು ವಿನ ನಡುವೆ ಯುದ್ಧ ನಡೆಯುತ್ತಿರುವಾಗ, ಮೇಘನಾದನು ಪ್ರಯೋಗಿಸಿದ ಅಸ್ತ್ರದಿಂದ , ಲಕ್ಷ್ಮಣನು ಹಾಗೂ ಹಲವು ವಾನರ ವೀರರು ಪ್ರಜ್ಞಾಹೀನನಾಗಿ ಬೀಳುತ್ತಾರೆ, ಆಗ ಹನುಮಂತ ಸಂಜೀವಿನಿ ಪರ್ವತವನ್ನು ಎತ್ತಿ ತಂದು ಎಲ್ಲರನ್ನೂ ರಕ್ಷಿಸುತ್ತಾನೆ, ಆಗ ದೇವತೆಗಳು ಸ್ವರ್ಗದಿಂದ ಸುರಿಸಿದ ಹೂವುಗಳು ಬ್ರಹ್ಮಕಮಲವೆಂದು ಹೇಳಲಾಗುತ್ತದೆ. ಇದು ನಂದಾ ದೇವಿಯ ನೆಚ್ಚಿನ ಹೂವು ಎಂದು ಪರಿಗಣಿಸಲಾಗಿದೆ. ನಂದಾದೇವಿಯಲ್ಲದೆ, ಈ ಹೂವನ್ನು ಕೇದಾರನಾಥ ಮತ್ತು ಬದರಿನಾಥದಲ್ಲಿರುವ ದೇವತೆಗಳಿಗೂ ಅರ್ಪಿಸಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮಕಮಲ ಸಸ್ಯವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಹಾಗೂ ಇಡಬೇಕು.
ವಾಸ್ತು ಶಾಸ್ತ್ರವು ಸಂಪ್ರದಾಯಿಕ ಭಾರತೀಯ ನಂಬಿಕೆ
ಬ್ರಹ್ಮ ಕಮಲ್ ಸಸ್ಯವು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಬ್ರಹ್ಮಕಮಲ ಗಿಡವನ್ನು ಬ್ರಹ್ಮಸ್ಥಾನ ಎಂದು ಕರೆಯಲಾಗುವ ಮನೆಯ ಮಧ್ಯಭಾಗದಲ್ಲಿ ನೆಡಬೇಕು. ಈ ಪವಿತ್ರ ದೈವಿಕ ಸಸ್ಯವನ್ನು ಮನೆಯ ಮಧ್ಯದಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಿರುತ್ತವೆ ಮತ್ತು ಸಾಕಷ್ಟು ಧನಾತ್ಮಕ ಶಕ್ತಿಗಳ ಪ್ರಯೋಜನಗಳು ಸಿಗುತ್ತದೆ.
ಹಾಗೆಯೇ ಈಶಾನ್ಯ ಮೂಲೆಯಲ್ಲಿ, ಈ ಸಸ್ಯವನ್ನು ಇರಿಸಲು ಅತ್ಯಂತ ಮಂಗಳಕರವಾದ ಹಾಗೂ ಉತ್ತಮವಾದ ದಿಕ್ಕು ಎಂದು ಹೇಳಲಾಗುತ್ತದೆ. ಈಶಾನ್ಯವು ನೀರಿನ ಅಂಶದೊಂದಿಗೆ ಸಂಬಂಧಿಸಿದೆ ಮತ್ತು ಸಂಪತ್ತು ಮತ್ತು ಸಮೃದ್ಧಿಯ ಮೂಲವೆಂದು ಪರಿಗಣಿಸಲಾಗಿದೆ. ಹಾಗೆ ದೈವಿಕ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಇರುತ್ತದೆ.

ಇನ್ನೂ ಬ್ರಹ್ಮ ಕಮಲ ದೈವಿಕ ಆಧ್ಯಾತ್ಮಿಕ ಪುಷ್ಪ ಮಾತ್ರ ಅಲ್ಲದೆ ಆಯುರ್ವೇದದಲ್ಲಿಯೂ ಕೂಡ ತನ್ನ ಸ್ಥಾನವನ್ನು ಪಡೆದುಕೊಂಡಿದೆ.
ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡುವುದರಿಂದ ಹಿಡಿದು ಲೈಂಗಿಕ ಆರೋಗ್ಯವನ್ನು ಉತ್ತೇಜಿಸುವವರೆಗೆ ಬ್ರಹ್ಮ ಕಮಲ ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಪುಷ್ಪವಾಗಿದೆ.
*ಲೇಖನೆ ರಕ್ಷಿತಾ.P