
ಬೆಂಗಳೂರು: ರಾಜ್ಯದಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಸಂಬಂಧ ಇಬ್ಬರು ಕಾಂಗ್ರೆಸ್ ಶಾಸಕರಿಗೆ ಇಡಿ ಯ ಬಂಧನದ ಭೀತಿ ಆದರೆ, ಇನ್ನೊಂದು ಕಡೆ ಮುಡಾ ಹಗರಣ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗ ಇದರ ಮಧ್ಯ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ಸಂಬಂಧ ಬಿಜೆಪಿ ನಾಯಕ, ಮಾಜಿ ವಿಧಾನ ಪರಿಷತ್ ಸದಸ್ಯ ವೀರಯ್ಯ ಅವರನ್ನು ಸಿಐಡಿ ಬಂಧಿಸಿದೆ.
ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ (ಡಿಡಿಯುಟಿಟಿಎಲ್) ಅಕ್ರಮ ಸಂಬಂಧ ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಅವರನ್ನು ಸಿಐಡಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್ ಗುತ್ತಿಗೆ ಅವ್ಯವಹಾರದಲ್ಲಿ ಆಗಿನ ಅಧ್ಯಕ್ಷರಾಗಿದ್ದ ಡಿ.ಎಸ್. ವೀರಯ್ಯ, ಗುತ್ತಿಗೆದಾರರಿಂದ ಮೂರು ಕೋಟಿ ರೂ. ಕಿಕ್ಬ್ಯಾಕ್ ಪಡೆದಿರುವುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ
ಟರ್ಮಿನಲ್ ವತಿಯಿಂದ 2021 ರಿಂದ 2023ರ ನಡುವೆ 821 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 9.18 ಕೋಟಿ ರೂ. ವೆಚ್ಚದ 153 ಕಾಮಗಾರಿಗಳನ್ನಷ್ಟೇ ನಿರ್ವಹಿಸಲಾಗಿತ್ತು. ಉಳಿದ 668 ಕಾಮಗಾರಿಗಳನ್ನು ಕೈಗೊಳ್ಳದೆಯೇ ನಕಲಿ ಬಿಲ್ ಸೃಷ್ಟಿಸಿ 39.42 ಕೋಟಿ ರೂ.ಗಳನ್ನು ಮೂರು ಗುತ್ತಿಗೆ ಏಜೆನ್ಸಿಗಳಿಗೆ ಹಣ ಬಿಡುಗಡೆ ಮಾಡಲಾಗಿತ್ತು.
‘ನಿಗಮದ 194ನೇ ನಿರ್ದೇಶಕ ಮಂಡಳಿ ಸಭೆಯನ್ನು 2021ರ ಅಕ್ಟೋಬರ್ನಲ್ಲಿ ನಡೆಸಲಾಗಿತ್ತು. ಈ ವೇಳೆ ಟ್ರಕ್ ಟರ್ಮಿನಲ್ಗಳ ನಿರ್ವಹಣೆ ಮಾಡಲು ₹10 ಕೋಟಿ ಮೊತ್ತದ ತುಂಡು ಗುತ್ತಿಗೆ ನೀಡಲು ಅನುಮೋದನೆ ಹೊರಡಿಸಲಾಗಿತ್ತು. ಇದಾದ ಬಳಿಕ ಕಾಮಗಾರಿ ನಡೆಸದೇ ₹47 ಕೋಟಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ. ವಿಲ್ಸನ್ ಗಾರ್ಡನ್ ಠಾಣೆಗೆ ಹಾಲಿ ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶಿವಪ್ರಕಾಶ್ ದೂರು ನೀಡಿದ್ದರು.ನಂತರ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ಅಂತೆಯೇ ತನಿಖೆಗಿಳಿದ ಸಿಐಡಿ ಅಧಿಕಾರಿಗಳು ಶುಕ್ರವಾರ ಅವರನ್ಜು ಬಂಧಿಸಿದ್ದಾರೆ.
ಅಕ್ರಮದಲ್ಲಿ ವೀರಯ್ಯ ಅವರೂ ಶಾಮೀಲಾಗಿರುವುದಕ್ಕೆ ಕೆಲವು ಸಾಕ್ಷ್ಯಗಳು ಲಭಿಸಿದ್ದು ಬಂಧಿಸಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಗುತ್ತಿಗೆದಾರರು ನೀಡಿದ ಕಿಕ್ಬ್ಯಾಕ್ ಹಣದಲ್ಲಿಯೇ ಡಿ.ಎಸ್. ವೀರಯ್ಯ ಅವರು ಕೆಂಗೇರಿ ವ್ಯಾಪ್ತಿಯ ಉಲ್ಲಾಳುವಿನಲ್ಲಿ ಒಂದು ನಿವೇಶನ ಖರೀದಿ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
ಇದೇ ಪ್ರಕರಣದಲ್ಲಿ ಡಿಡಿಯುಟಿಟಿಎಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಶಂಕರಪ್ಪ ಅವರನ್ನೂ ಸಿಐಡಿ ಮೇ 27ರಂದು ಬಂಧಿಸಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾಗಿದ್ದ ಶಂಕರಪ್ಪ, ಈ ಹಿಂದೆ ಡಿಡಿಯುಟಿಟಿಎಲ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.