
ಕೋಲ್ಕತಾ : ಭಾರತ ಹಿಂದೂ ರಾಷ್ಟ್ರವಲ್ಲ ಅನ್ನೋದು ಈ ಬಾರಿಯ ಲೋಕಸಭಾ ಚುನಾವಣೆಯಿಂದ ಸ್ಪಷ್ಟವಾಗಿದೆ ಎಂದು ನೊಬೆಲ್ ಪುರಸ್ಕೃತ ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ಬಹುಮತ ಪಡೆಯದ ಬಿಜೆಪಿ, ಎನ್ಡಿಎ ಮೈತ್ರಿ ಸರ್ಕಾರ ರಚನೆಗೆ ಅಮರ್ತ್ಯ ಸೇನ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಬಿಜೆಪಿ ಆಡಳಿತವನ್ನು ಬ್ರಿಟಿಷ್ ಆಡಳಿತಕ್ಕೆ ಹೋಲಿಸಿದ್ದಾರೆ. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸಲು ಹೊರಟ ಬಿಜೆಪಿಗೆ ಜನರು ಉತ್ತರ ನೀಡಿದ್ದಾರೆ ಎಂದಿದ್ದಾರೆ.
ನಾನು ಚಿಕ್ಕವನಿದ್ದಾಗ ಬ್ರಿಟಿಷರು ನನ್ನ ಚಿಕ್ಕಪ್ಪಂದಿರು, ಸೋದರ ಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕುತ್ತಿದ್ದರು. ಬ್ರಿಟಿಷರ ಆಳ್ವಿಕೆಯಿಂದಲೂ ದೇಶದಲ್ಲಿ ಜನರನ್ನು ವಿಚಾರಣೆ ಮಾಡದೆ ಜೈಲಿಗೆ ಹಾಕುವುದು ಮುಂದುವರೆದಿದೆ. ಈ ಪದ್ಧತಿ ಕಾಂಗ್ರೆಸ್ ಆಡಳಿತಕ್ಕೆ ಹೋಲಿಸಿದರೆ ಬಿಜೆಪಿ ಸರ್ಕಾರದಲ್ಲಿ ಅತೀ ಹೆಚ್ಚು ಚಾಲ್ತಿಯಲ್ಲಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದ್ದು, ಅವು ನಿಲ್ಲಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಸಂಪುಟದ ಬಗ್ಗೆ ಮಾತನಾಡಿದ ಅವರು, ‘ಸಂಪುಟ ಖಾತೆಗಳಲ್ಲಿ ಅಂತಹ ಬದಲಾವಣೆಗಳೇನು ಆಗಿಲ್ಲ. ಹಿಂದೆ ಇದ್ದವರೆ ಈಗ ಮುಂದುವರಿದಿದ್ದಾರೆ. ಅಲ್ಪಸ್ವಲ್ಪ ಬದಲಾವಣೆ ಮಾಡಿದರೂ ರಾಜಕೀಯವಾಗಿ ಪ್ರಬಲರಾಗಿರುವವರು ಇನ್ನೂ ಪ್ರಬಲರಾಗಿಯೇ ಉಳಿದಿದ್ದಾರೆ’ ಎಂದರು.
ರಾಮಮಂದಿರ ನಿರ್ಮಾಣದ ಹೊರತಾಗಿಯೂ ಬಿಜೆಪಿ ಫೈಜಾಬಾದ್ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಲಾಯಿತು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಇದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ನಡೆಯಬಾರದಿತ್ತು. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ ಗುರುತನ್ನು ಬದಲಾಯಿಸುವ ಯತ್ನಗಳು ನಡೆಯುತ್ತಿವೆ’ ಎಂದರು.
ಭಾರತ ಹಿಂದೂ ರಾಷ್ಟ್ರವಲ್ಲ, ಅದು ಸರ್ವಧರ್ಮದ ರಾಷ್ಟ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ .
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಕಾಂಗ್ರೆಸ್ ನಿಲುವು ಕೂಡಾ ಮೊದಲಿನಿಂದಲೂ ಇದೆ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಭಾರತ ಜಾತ್ಯಾತೀತ ರಾಷ್ಟ್ರವಾಗಿದೆ. ಅದು ಕೇವಲ ಹಿಂದೂ ರಾಷ್ಟ್ರವಾಗಿಲ್ಲ ಎಂಬ ಡಾ. ಅಮಾರ್ತ್ಯ ಸೇನ್ ಹೇಳಿಕೆಯನ್ನು ಸಮರ್ಥಿಸಿದ್ದಾರೆ.