
ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ ಮಾಡಿದ ಪತ್ರಕರ್ತ ಹಾಗೂ ಲೇಖಕ ಅಜಿತ್ ಭಾರತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಅಯೋಧ್ಯೆಯಲ್ಲಿ ರಾಹುಲ್ ಗಾಂಧಿ ಮಸೀದಿಯನ್ನು ಮರು ನಿರ್ಮಾಣ ಮಾಡಲಿದ್ದಾರೆ, ಎಂದು ಅಜಿತ್ ಭಾರತಿ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಕೆ ಬೋಪಣ್ಣ ಅವರು ನೀಡಿರುವ ದೂರಿನನ್ವಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 153A (ಧರ್ಮ, ಜಾತಿ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವುದು) ಹಾಗೂ 505(2) (ಜಾತಿ, ಧರ್ಮ, ಜನಾಂಗದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಉದ್ದೇಶದಿಂದ ನಕಲಿ ಸುದ್ದಿ ಹರಡುವಿಕೆ) ಕಾಯ್ದೆಯಡಿ ಅಜೀತ್ ಭಾರತಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂನ್ 6 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದ ಅಜೀತ್ ಭಾರತಿ, “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶ್ರೀರಾಮ ಮಂದಿರದ ಇರುವ ಜಾಗದಲ್ಲಿ ಬಾಬರಿ ಮಸೀದಿಯನ್ನು ಮರು ನಿರ್ಮಾಣ ಮಾಡಲಿದ್ದಾರೆ” ಎಂದು ಹೇಳಿದ್ದರು. ಆದರೆ, ರಾಹುಲ್ ಗಾಂಧಿಯವರು ತಮ್ಮ ಯಾವುದೇ ಭಾಷಣಗಳಲ್ಲಿ ಅಂತಹ ಯಾವುದೇ ಹೇಳಿಕೆ ನೀಡಿರುವುದಿಲ್ಲ. ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ, ಅಜೀತ್ ಭಾರತಿಯವರು ಸುಳ್ಳು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಇದು ಸಾರ್ವಜನಿಕ ವ್ಯವಸ್ಥೆಯಲ್ಲಿ ಶಾಂತಿಯನ್ನು ಕದಡುವ ಮತ್ತು ಪ್ರಚೋದಿಸುವ ಸ್ಪಷ್ಟ ಉದ್ದೇಶದಿಂದ ಕೂಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ
ಸದ್ಯ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಲಿದ್ದಾರೆ.