
ಬಾಗಲಕೋಟೆ : ರಾಜ್ಯದಲ್ಲಿ ಈಗಾಗಲೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣ ಹಾಗೂ ಮುಡಾ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ಕೊಟ್ಟಿಯಂತರ ರೂಪಾಯಿ ಹಗರಣ ನಡೆದಿದೆ.
ಬಾಗಲಕೋಟೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮಾದರಿಯಲ್ಲಿ ವಂಚನೆ ಆಗಿದ್ದು, ಪ್ರವಾಸೋದ್ಯಮ ಇಲಾಖೆಯ 2 ಕೋಟಿ 47 ಲಕ್ಷ,73 ಸಾವಿರದ 999 ರೂಪಾಯಿ ಐಡಿಬಿಐ ಬ್ಯಾಂಕ್ ಖಾತೆಗಳ ಮೂಲಕ ವಿವಿಧ ಖಾತೆಗೆ ಆಕ್ರಮವಾಗಿ ವರ್ಗಾವಣೆ ಆಗಿರುವ ಆರೋಪ ಕೇಳಿ ಬಂದಿದೆ. ಪ್ರವಾಸೋದ್ಯಮ ಇಲಾಖೆಯ ಹಣ ವಿವಿಧ ಖಾತೆಗೆ ಆಕ್ರಮ ವರ್ಗಾವಣೆ ಆಗಿದ್ದು ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಹೆಸರಿನಲ್ಲಿದ್ದ ಮೂರು ಅಕೌಂಟ್ಗಳಿಂದ ಹಣ ವರ್ಗಾಯಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇಲಾಖೆಯ ಹಿರಿಯ ಅಧಿಕಾರಿಗಳು ಅಕೌಂಟ್ಗಳ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಸಮಿತಿ ಹೆಸರಿನ ಖಾತೆಗಳಲ್ಲಿ ಎರಡೂವರೆ ಕೋಟಿ ರೂ. ಬದಲು ಕೇವಲ 2, 925 ರೂ. ಮಾತ್ರ ಇರುವುದು ಗಮನಿಸಿ ಅಧಿಕಾರಿಗಳು ಹೌಹಾರಿದ್ದಾರೆ.
ತಕ್ಷಣ ಉಪನಿರ್ದೇಶಕ ಗೋಪಾಲ ಹಿತ್ತಲಮನಿ ಅವರು ಸಿಇಎನ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಂಚನೆ, ಅವ್ಯವಹಾರ ಸೇರಿದಂತೆ ಅಕ್ರಮ ಭ್ರಷ್ಟಾಚಾರದ ಆರೋಪದ ಮೇಲೆ ದೂರು ದಾಖಲಾಗಿದೆ.
ಬ್ಯಾಂಕ್ ಖಾತೆಯ ಮಾಹಿತಿ
ಐಡಿಬಿಐ ಬ್ಯಾಂಕ್ ಖಾತೆ ನಂಬರ್ 1 071104000160063 ಮೂಲಕ 28.10.2021 ರಿಂದ 22/2024ರ ವರೆಗೆ ಒಟ್ಟು 1,35,96,500 ರೂ, ಖಾತೆ ನಂ 1071104000165228 ಮೂಲಕ 4-5-2022 ರಿಂದ 7-11-2022 ವರೆಗೆ 1,01,33,750 ರೂ, ಮೂರನೇ ಖಾತೆ 1071104000165501 ಖಾತೆ ಮೂಲಕ 11.10.2022 ರಂದು 10, 43,749 ರೂ. ಸೇರಿ ಒಟ್ಟು 2,47,73,999 ರೂ. ಹಣವನ್ನು 28.10.2021 ರಿಂದ 22-2-2024ರ ವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿತರು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇಲಾಖೆ ಹಣ ತೆಗೆದುಕೊಂಡು ಸರಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಐಪಿಸಿ 1860(us 403,406,409,420) ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.