
ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸನ್ನಿಹದಲ್ಲಿರುವಂತೆಯೇ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ.
ಹರ್ಯಾಣದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಾಗುತ್ತಿರುವ ಹೊತ್ತಲ್ಲಿಯೇ ಆಘಾತ ಎದುರಾಗಿದೆ.ಪಕ್ಷದ ಹಿರಿಯ ನಾಯಕಿ ಕಿರಣ್ ಚೌಧರಿ ಹಾಗೂ ಆಕೆಯ ಪುತ್ರಿ ಶೃತಿ ಚೌಧರಿ ಅವರು ಅವರ ಬೆಂಬಲಿಗರ ಜೊತೆ ಇಂದು ಬಿಜೆಪಿಗೆ ಸೇರ್ಪಡೆಗೊಂಡರು .
ಅವರು ತಮ್ಮ ಮಗಳಿಗೆ ಭಿವಾನಿ ಮಹೇಂದ್ರಗಢ ಕ್ಷೇತ್ರದಿಂದ ಲೋಕಸಭೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ಮಗಳಿಗೆ ಟಿಕೆಟ್ ನೀಡದ ಕಾರಣ ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಶಾಸಕ ರಾವ್ ದಾನ್ ಸಿಂಗ್ ಅವರನ್ನು ಮಹಿಂದರ್ಗಢ ಲೋಕಸಭೆಯಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿತ್ತು. ಆದರೆ, ಚುನಾವಣೆಯಲ್ಲಿ ಸೋತರು. ಸೋಲಿಗೆ ಕಿರಣ್ ಚೌಧರಿ ಕಾರಣವೆಂದು ಆರೋಪಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಿರಣ್, ಸರಿಯಾಗಿ ಟಿಕೆಟ್ ಹಂಚಿಕೆ ಮಾಡಿದ್ದರೆ ಇಲ್ಲಿಂದ ಕಾಂಗ್ರೆಸ್ ಗೆಲ್ಲಬಹುದಿತ್ತು ಎಂದಿದ್ದರು.
ಎರಡು ದಿನಗಳ ಹಿಂದೆ ಭಿವಾನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಕ್ಷ ತೊರೆಯುವ ಸುಳಿವು ನೀಡಿದ್ದರು. ಕಿರಣ್ ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದವರು. ಆಕೆಯ ಮಾವ ಬನ್ಸಿ ಲಾಲ್ ಹರಿಯಾಣದ ಮುಖ್ಯಮಂತ್ರಿಯಾಗಿದ್ದರು.
ಕಿರಣ್ ಚೌಧರಿ ಹಾಗೂ ಪುತ್ರಿ ಶ್ರುತಿ ಚೌಧರಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತಮ್ಮಂತಹ ಪ್ರಾಮಾಣಿಕ ದನಿಗಳಿಗೆ ಜಾಗವಿಲ್ಲದೇ ವೈಯಕ್ತಿಕ ದ್ವೇಷದಂತೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಕ್ಷದ ನಾಯಕತ್ವವು ತನ್ನ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ಸಂಚು, ಅವಮಾನ ಮತ್ತು ಪಿತೂರಿ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ಶ್ರುತಿ ಚೌಧರಿ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಹರಿಯಾಣ ಕಾಂಗ್ರೆಸ್ ಏಕ ವ್ಯಕ್ತಿ ಕೇಂದ್ರಿತವಾಗಿದೆ ಎಂದು ಟೀಕಿಸಿದ್ದಾರೆ.
ಪಕ್ಷಕ್ಕೆ ಸೇರಿದ ನಂತರ ಬಿಜೆಪಿ ನಾಯಕರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಿರಣ್ ಚೌಧರಿ, “ಈಗ ನಾನೂ ಕೇಸರಿಮಯವಾಗಿದ್ದೇನೆ. ಆದರೆ ಚೌಧರಿ ಬನ್ಸಿ ಲಾಲ್ ಅವರ ಬಣ್ಣವೂ ಇದೇ ಆಗಿತ್ತು ಎಂಬುದು ನೆನಪಿರಲಿ.” ಎಂದು ಹೇಳಿದರು.
“ನಾವು 20 ವರ್ಷಗಳ ಹಿಂದೆ ಹರಿಯಾಣ ವಿಕಾಸ್ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದ್ದೆವು. ಆದರೆ, ಇಂದು ಕಾಂಗ್ರೆಸ್ ಧ್ವಜವನ್ನು ಬಿಟ್ಟು ಬಿಜೆಪಿಯ ಧ್ವಜ ಹಿಡಿಯುವಂತೆ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯ ಪ್ರಚಂಡ ವಿಜಯವನ್ನು ಖಚಿತಪಡಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ಹೋರಾಡುವಂತೆ ನಾನು ನಿಮಗೆ ಕರೆ ನೀಡುತ್ತೇನೆ” ಎಂದು ಅವರು ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಸೇರಿದ್ದ ತಮ್ಮ ಸಾವಿರಾರು ಬೆಂಬಲಿಗರಿಗೆ ಕರೆ ನೀಡಿದರು.”ಇಂದಿನಿಂದ ನಮ್ಮ ಕೆಲಸ ಪ್ರಾರಂಭವಾಗಿದೆ. ಚೌಧರಿ ಬನ್ಸಿ ಲಾಲ್ ಅವರ ಹೆಸರನ್ನು ಸ್ಮರಿಸಿಕೊಂಡು ಬಿಜೆಪಿಯ ನೀತಿಗಳನ್ನು ಪ್ರಚಾರ ಮಾಡಲು ಆರಂಭಿಸಿ. ಬಿಜೆಪಿಯ ಉನ್ನತ ನಾಯಕತ್ವವನ್ನು ಶ್ಲಾಘಿಸಿ, ಹರಿಯಾಣದ ಮೂಲೆ ಮೂಲೆಗೆ ಭೇಟಿ ನೀಡಿ. ಇದು ಚೌಧರಿ ಬನ್ಸಿ ಲಾಲ್ ಮತ್ತು ಚೌಧರಿ ಸುರೇಂದ್ರ ಸಿಂಗ್ ಅವರಿಗೆ ನಾವು ನೀಡಬಹುದಾದ ನಿಜವಾದ ಗೌರವವಾಗಿದೆ” ಎಂದು ಅವರು ಹೇಳಿದ್ದಾರೆ.ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಇಬ್ಬರೂ ಬಿಜೆಪಿಗೆ ಸೇರಿದರು.