
ಬೆಂಗಳೂರಿನಲ್ಲಿ ಹರ್ಷಿಕಾ ಪೂಣಚ್ಚ ದಂಪತಿಗೆ ಕರಾಳ ಅನುಭವ, ಕನ್ನಡ ಮಾತನಾಡುವುದೇ ತಪ್ಪಾ ಎಂದು ಕೇಳಿದ ನಟಿ…?
ಬೆಂಗಳೂರಿನಲ್ಲಿ ಸ್ಥಳೀಯರು ಎಷ್ಟು ಸುರಕ್ಷಿತ…? ಕಹಿ ಘಟನೆ ಹಂಚಿಕೊಂಡ ನಟಿ ಹರ್ಷಿಕಾ…!
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ದಂಪತಿ ಬೆಂಗಳೂರಿನಲ್ಲಿ ಕರಾಳ ಅನುಭವವೊಂದಕ್ಕೆ ಸಾಕ್ಷಿ ಆಗಿದ್ದಾರೆ. ರೆಸ್ಟೋರೆಂಟ್ವೊಂದಕ್ಕೆ ಊಟಕ್ಕೆ ಹೋದಾಗ, ಅಲ್ಲಿನ ಕೆಲವರು ಹರ್ಷಿಕಾ ಪತಿ ಭುವನ್ ಮೇಲೆ ಹಲ್ಲೆ ಮಾಡಿದ್ದಾರೆ. “ನಾವು ಕನ್ನಡದಲ್ಲಿ ಮಾತನಾಡಿದ್ದೇ ಅವರಿಗೆ ತಪ್ಪಾಗಿ ಕಾಣಿಸಿದೆ” ಎಂದು ನಟಿ ಹರ್ಷಿಕಾ ಪೂಣಚ್ಚ ಆರೋಪಿಸಿದ್ದಾರೆ. ಈ ಬಗ್ಗೆ ಸುದೀರ್ಘವಾಗಿ ಅವರು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ…!
ನಟಿ ಹರ್ಷಿಕಾ ಪೋಸ್ಟ್ ಮಾಡಿದ್ದೇನು…?
ಎರಡು ದಿನಗಳ ಹಿಂದೆ ಫ್ರೇಜರ್ ಟೌನ್ ಪ್ರದೇಶದ ಸಮೀಪವಿರುವ ಪುಲಿಕೇಶಿ ನಗರದ ಮಸೀದಿ ರಸ್ತೆಯಲ್ಲಿರುವ ಕರಾಮ ಎಂಬ ರೆಸ್ಟೋರೆಂಟ್ ಗೆ ಕುಟುಂಬದೊಂದಿಗೆ ಊಟಕ್ಕೆ ಹೋಗಿದ್ದೆ, ಊಟ ಮುಗಿಸಿ ಅಲ್ಲಿಂದ ಹೊರಟಾಗ ಕಾರಿನ ಚಾಲಕ ಬದಿಯ ಕಿಟಕಿ ಬಳಿ ಬಂದ ಇಬ್ಬರು ವ್ಯಕ್ತಿಗಳು, ನಿಮ್ಮ ವಾಹನ ತುಂಬಾ ದೊಡ್ಡದಾಗಿದೆ, ಇದು ನಮಗೆ ತಾಕಬಹುದು ಎಂದು ವಾದಿಸಲು ಆರಂಭಿಸಿದರು…!
ಇನ್ನು ವಾಹನ ಮುಂದಕ್ಕೆ ಚಲಿಸಿಲ್ಲವಲ್ಲ, ಸ್ವಲ್ಪ ಸರಿದುಕೊಳ್ಳಿ, ನಾವು ಮುಂದೆ ಸಾಗುತ್ತೇವೆ ಎಂದು ನನ್ನ ಪತಿ ಹೇಳಿದರಾದರೂ ಬೇರೆ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಅವರು , ಕೆಲವೇ ಕ್ಷಣಗಳಲ್ಲಿ 20 – 30 ಜನರನ್ನು ಅಲ್ಲಿಗೆ ಕರೆಸಿದರು…!!
ಅವರಲ್ಲಿ ಇಬ್ಬರು ನನ್ನ ಗಂಡನ ಚಿನ್ನದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು, ನನ್ನ ಪತಿ ತಕ್ಷಣವೇ ಸರವನ್ನು ನನ್ನ ಕೈಗೆ ಕೊಟ್ಟರು, ಅಷ್ಟೊತ್ತಿಗಾಗಲೇ ಇಡೀ ತಂಡವು, ಚಿನ್ನದ ಸರ ಮತ್ತು ಬೆಲೆ ಬಾಳುವ ವಸ್ತುಗಳು ಕೈಗೆ ಸಿಗದೇ ಇದ್ದುದರಿಂದ ರೊಚ್ಚಿಗೆದ್ದು ನಮ್ಮ ವಾಹನಕ್ಕೆ ಹಾನಿ ಮಾಡಿ ನಮಗೆ ಅರ್ಥವಾಗದ ಭಾಷೆಯಲ್ಲಿ ನಿಂದಿಸಲು ಆರಂಭಿಸಿದರು ಎಂದು ನಟಿ ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ…!
ನಾನು ಗಮನಿಸಿದಂತೆ, ನಾವು ಕನ್ನಡದಲ್ಲಿ ಮಾತನಾಡುತ್ತಿರುವುದು ಅವರಿಗೆ ಸಮಸ್ಯೆ ಆಗಿ ಕಾಣಿಸಿತ್ತು, ನೀವು ನಮ್ಮ ಏರಿಯಾಗೆ ಬಂದು ನಿಮಗೆ ಬೇಕಾದ ಭಾಷೆಗಳಲ್ಲಿ ಮಾತನಾಡುವುದನ್ನು ನಿಲ್ಲಿಸಿ. “ಯೇ ಲೋಕಲ್ ಕನ್ನಡ್ ವಾಲೇ” ಎಂದರು. ನನ್ನ ಗಂಡ ಮತ್ತು ನಾನು ಕನ್ನಡದಲ್ಲಿ ಮಾತನಾಡಿದಾಗ ಅದು ಅವರನ್ನು ಹೆಚ್ಚು ಕೆರಳಿಸಿತು. “ನಿಮ್ಮ ಕನ್ನಡ್ ಸ್ಟೈಲ್ ಅನ್ನು ನೀವೇ ಇಟ್ಕೊಳ್ಳಿ” ಎಂದರು. ಆ ಗುಂಪಿನಲ್ಲಿ ಹೆಚ್ಚಿನವರು ಹಿಂದಿ, ಉರ್ದು ಮತ್ತು ಕೆಲವರು ಅರೆಬರೆ ಕನ್ನಡದಲ್ಲಿ ಮಾತನಾಡುತ್ತಿದ್ದರು. ನಾನು ನಮಗೆ ಪರಿಚಯವಿದ್ದ ಇನ್ಸ್ಪೆಕ್ಟರ್ಗೆ ತುರ್ತು ಕರೆ ಮಾಡಿದೆ. ಆದರೆ ಅವರೆಲ್ಲರೂ ಏನೂ ಆಗಿಲ್ಲ ಎಂಬಂತೆ ಕೆಲವೇ ಸೆಕೆಂಡುಗಳಲ್ಲಿ ಅಲ್ಲಿಂದ ಹೋಗಿಬಿಟ್ಟರು” ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ…!!