
ನವದೆಹಲಿ: 18ನೇ ಲೋಕಸಭೆಯ ಸ್ಪೀಕರ್ ಆಗಿ 2 ನೇ ಬಾರಿಗೆ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಧ್ವನಿ ಮತದ ಮೂಲಕ ಲೋಕಸಭೆ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ.
ಪ್ರಧಾನಿ ಮೋದಿ 2ನೇ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಓಂ ಬಿರ್ಲಾ ಇದೀಗ ಸತತ 2ನೇ ಬಾರಿಗೆ ಲೋಕಸಭಾ ಸ್ವೀಕರ್ ಆಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಉಪಸಭಾಪತಿ ಸ್ಥಾನವನ್ನು ನೀಡಲು ನಿರಾಕರಿಸುವ ಮೂಲಕ ವಿರೋಧ ಪಕ್ಷಗಳ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ 48 ವರ್ಷಗಳ ನಂತರ ಲೋಕಸಭಾಧ್ಯಕ್ಷ ಸ್ಥಾನಕ್ಕೆ ಇಂದು ಸ್ಪರ್ಧೆ ನಡೆಯಿತು.
ಓಂ ಬಿರ್ಲಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಡಿಸಿದರು. ಹಂಗಾಮಿ ಸ್ಪೀಕರ್ ಅವರು ಧ್ವನಿ ಮತದ ಮೂಲಕ ಸಂಸದರ ಮತಗಳನ್ನು ಅಂಗೀಕರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಹೆಸರನ್ನು ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಅವರನ್ನು ಆಸನಕ್ಕೆ ಕರೆದೊಯ್ದರು. ಬಳಿಕ ನೀವು ಎರಡನೇ ಬಾರಿಗೆ ಈ ಸ್ಥಾನವನ್ನು ಅಲಂಕರಿಸಿರುವುದು ಸದನದ ಸೌಭಾಗ್ಯ. ನಾನು ನಿಮ್ಮನ್ನು ಮತ್ತು ಇಡೀ ಸದನವನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡುವಂತೆ ಷರತ್ತು ಹಾಕಿದ್ದರು. ಈ ಬಗ್ಗೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಒಮ್ಮತ ಮೂಡಿರಲಿಲ್ಲ. ಎನ್ಡಿಎಯಿಂದ ಓಂ ಬಿರ್ಲಾ ಮತ್ತು ವಿರೋಧ ಪಕ್ಷದಿಂದ ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು.
ಕೋಚಿಂಗ್ ಫ್ಟಾಕ್ಟರಿಗೆ ಹೆಸರುವಾಸಿಯಾಗಿರುವ ರಾಜಸ್ಥಾನದ ಕೋಟಾ ಕ್ಷೇತ್ರದಿಂದ ಸಂಸದರಾಗಿರುವ 61 ವರ್ಷದ ಓಂ ಬಿರ್ಲಾ ಅವರು ಮೂರನೇ ತಲೆಮಾರಿನ ಆರ್ಎಸ್ಎಸ್ ಕುಟುಂಬದಿಂದ ಬಂದವರು. ಅದಕ್ಕೂ ಮುನ್ನ ಅವರು ರಾಜಸ್ಥಾನ ವಿಧಾನಸಭೆಯಲ್ಲಿ ಶಾಸಕರಾಗಿದ್ದರು.
ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 2 ಬಾರಿ ಮಾತ್ರ ಚುನಾವಣೆಗಳು ನಡೆದಿದೆ. 1952ರಲ್ಲಿ ಜಿ.ವಿ.ಮಾವಲಂಕರ್ ಹಾಗೂ ಶಂಕರ್ ಶಾಂತಾರಾಮ್ ಅವರು ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ಆಗಿತ್ತು. ಮಾವಲಂಕರ್ ಅವರು 394 ಮತಗಳನ್ನು ಪಡೆದು ವಿಜೇತರಾದರೆ, ಶಾಂತಾರಾಮ್ ಅವರು ಕೇವಲ 55 ಮತಗಳನ್ನು ಗಳಿಸಿದ್ದರು. ತುರ್ತು ಪರಿಸ್ಥಿತಿಯ ವೇಳೆ ಅಂದರೆ 1976ರಲ್ಲಿ ಬಲಿರಾಮ್ ಭಗತ್ ಹಾಗೂ ಜಗನ್ನಾಥ ರಾವ್ ಅವರು ಸ್ಪೀಕರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಭಗತ್ ಅವರು 344 ಮತಗಳೊಂದಿಗೆ ಆಯ್ಕೆಯಾಗಿದ್ದರೆ, ಜಗನ್ನಾಥರಾವ್ ಅವರು 58 ಮತ ಪಡೆದು ಪರಾಜಿತರಾಗಿದ್ದರು.