
ಕೇರಳದಲ್ಲಿ ಹೇಗಾದರೂ ಮಾಡಿ ಈ ಬಾರಿ ಖಾತೆ ತೆರೆಯಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಬಿಜೆಪಿ ಘಟಾನುಘಟಿ ನಾಯಕರನ್ನೇ ಚುನಾವಣಾ ಕಣಕ್ಕೆ ಇಳಿಸಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಅಶ್ವಿನಿ ಎಂ ಎಲ್ ಅವರನ್ನು ಬಿಜೆಪಿ ಈ ಬಾರಿ ಅದ್ರಷ್ಟ ಪರೀಕ್ಷೆಗೆ ಇಳಿಸಿದೆ.
ಅಶ್ವಿನಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳಾ ಅಭ್ಯರ್ಥಿಯಾಗಿದ್ದಾರೆ…!
ಯಾರು ಈ ಅಶ್ವಿನಿ ಎಂ ಎಲ್…?
ಅಶ್ವಿನಿ ಎಂ ಎಲ್ ವಯಸ್ಸು 38, ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲ್ಲೂಕಿನ ನಿವಾಸಿ. ಅವರ ಪೋಷಕರು ಮಂಜೇಶ್ವರದವರೇ. ಆದರೆ ಬಹಳ ವರ್ಷಗಳ ಹಿಂದೆಯೇ ಬೆಂಗಳೂರಿಗೆ ತೆರಳಿದರು. ಅಶ್ವಿನಿ ಕೂಡ ಬೆಂಗಳೂರಿನಲ್ಲಿಯೇ ಹುಟ್ಟಿ ಅಲ್ಲಿಯೇ ಶಿಕ್ಷಣ ಪೂರೈಸಿದವರು. ಪದವಿ ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿಯೇ ಕೆಲಸ ಮಾಡಿಕೊಂಡಿದ್ದವರು. ಮದುವೆಯಾಗಿದ್ದು ಕಾಸರಗೋಡು ಮೂಲದವರನ್ನು. ಇದರಿಂದ ಪೋಷಕರು ಬೆಂಗಳೂರಿನಲ್ಲಿದ್ದರೆ, ಅಶ್ವಿನಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಕೊಂಡು ಈಗ ಮಂಜೇಶ್ವರ ತಾಲ್ಲೂಕಿನ ಪಂಚಾಯಿತಿ ಒಂದರ ಸದಸ್ಯೆ. ಬಿಜೆಪಿಯಲ್ಲೂ ಹಲವಾರು ವರ್ಷಗಳಿಂದ ಸಕ್ರಿಯರಾಗಿದ್ದಾರೆ…!
ಇದರೊಟ್ಟಿಗೆ ಅಶ್ವಿನಿ ಅವರಿಗೆ ಬಹು ಭಾಷೆಗಳು ಬರುತ್ತವೆ. ಮಲಯಾಳಂ, ಕನ್ನಡ, ಉರ್ದು, ತುಳು, ಕೊಂಕಣಿ, ಮರಾಠಿ, ಭಾಷೆಗಳನ್ನು ಮಾತನಾಡುತ್ತಾರೆ. ಒಂದೊಂದು ಭಾಷೆಯೂ ಭಿನ್ನ. ಏಳು ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಹಾಗೂ ಜನರೊಂದಿಗೆ ಈ ಭಾಷೆಗಳಲ್ಲಿ ಸಂವಹನ ಮಾಡಬಲ್ಲರು. ಬೆಂಗಳೂರಿನಲ್ಲಿದ್ದಾಗ ನೆರೆ ಹೊರೆಯವರು ತಮಿಳು ಮಾತನಾಡುತ್ತಿದ್ದುದರಿಂದ ಆ ಭಾಷೆಯೂ ಕೂಡ ಇವರಿಗೆ ಬರುತ್ತದೆ. ಇನ್ನು ಹಿಂದಿ ಹಾಗೂ ಇಂಗ್ಲೀಷ್ ಕೂಡ ಇವರಿಗೆ ತಿಳಿದಿದೆ. ಈ ಮೂಲಕ ಒಟ್ಟು ಹತ್ತು ಭಾಷೆಗಳ ಪ್ರವೀಣೆಯಾಗಿದ್ಧಾರೆ ಅಶ್ವಿನಿ ಎಂ ಎಲ್…!!
ಇವರ ಸಂಘಟನಾ ಕಾರ್ಯಾಶೈಲಿಯನ್ನು ಗಮನಿಸಿದ ಹೈಕಮಾಂಡ್ ಇವರಿಗೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯ ಜವಾಬ್ದಾರಿಯನ್ನು ಹೆಗಲಲ್ಲಿ ಇರಿಸಿತು. ಇದೀಗ ರಾಷ್ಟ್ರೀಯ ಮಟ್ಟದ ನೇತಾರೆಯಾಗಿ ದೇಶಾದ್ಯಂತ ಪಕ್ಷದ ಸಂಘಟನಾ ಕೆಲಸದಲ್ಲಿ ತೊಡಗಿದ್ದಾರೆ. ಈ ಬಾರಿ ಕಾಸರಗೋಡಿನ ಟಿಕೆಟ್ ನೀಡುವುದರೊಂದಿಗೆ ಪಕ್ಷ ಅತೀ ದೊಡ್ಡ ಜವಾಬ್ದಾರಿಯನ್ನು ಅಶ್ವಿನಿ ಹೆಗಲ ಮೇಲೆ ಹೊರಿಸಿದೆ…!
LDF UDF ಭದ್ರಕೋಟೆ ಕಾಸರಗೋಡು
ಲೋಕಸಭೆಯಿರಲಿ, ವಿಧಾನಸಭೆಯೇ ಇರಲಿ ಶತಪ್ರಯತ್ನದ ಹೊರತಾಗಿಯೂ ಗೆಲುವಿನ ದಡದವರೆಗೂ ಬಂದು ಬಿಜೆಪಿ ಪಕ್ಷ ಇಲ್ಲಿ ಮುಗ್ಗರಿಸಿ ಬಿದ್ದಿದೆ. LDF ಅಥವಾ UDF ಮೇಲುಗೈ ಸಾಧಿಸುತ್ತಿದ್ದರೂ ಬಿಜೆಪಿಯದ್ದು ಇಲ್ಲಿ ಛಲಬಿಡದ ತ್ರಿವಿಕ್ರಮ ಪ್ರಯತ್ನ. ಈ ಬಾರಿ ಅಶ್ವಿನಿ ಯಶಸ್ವಿ ಆಗುವರೇ ಎಂಬ ಕುತೂಹಲ ಇದೀಗ ಜಿಲ್ಲೆಯಲ್ಲಿ ಮನೆ ಮಾಡಿದೆ…!