
ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು ಮಳೆಯ ಅಬ್ಬರಕ್ಕೆ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳು ತತ್ತರಿಸಿ ಹೋಗಿವೆ.
ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಈಗಾಗಲೇ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಕೆಲವೊಂದು ಸೂಚನೆಗಳನ್ನು ಕೂಡ ನೀಡಿದ್ದು ಹಾಗೂ ರೆಡ್ ಅಲರ್ಟ್ ಕೂಡ ಘೋಷಣೆ ಮಾಡಿದ್ದಾರೆ,
ಮುಂದಿನ ನಾಲ್ಕು ದಿನ ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ 19 ರಿಂದ 21 ರವರೆಗೆ ಭಾರೀ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಿಗೆ ಅತ್ಯಂತ ಭಾರೀ ಮಳೆಯಾಗುವ ಸಾದ್ಯತೆ ಇರುವುದರಿಂದ ಇಂದು ಮತ್ತು ನಾಳೆ (ಜುಲೈ 19 ಹಾಗೂ 20 ರಂದು) ರೆಡ್ ಅಲರ್ಟ್ ನೀಡಲಾಗಿದೆ. ಜುಲೈ 21 ಹಾಗೂ 22 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಉತ್ತರ ಕನ್ನಡ ಜನರ ಜೀವನ ಹೇಳತಿರದು ಒಂದು ಕಡೆ ಗುಡ್ಡ ಕುಸಿಯುವ ಭೀತಿ ಇನ್ನೊಂದು ಕಡೆ ಕೃಷಿ ಭೂಮಿಗೆ ನುಗ್ಗುತ್ತಿರುವ ನೆರೆ ನೀರುಗಳು.
ಆತಂಕದಲ್ಲಿ ಜೀವನ ಕಳೆಯುವ ಸ್ಥಿತಿ ಉತ್ತರ ಕನ್ನಡ ಭಾಗದಲ್ಲಿ ನಿರ್ಮಾಣವಾಗಿದೆ ಉತ್ತರ ಕನ್ನಡ ಜಿಲ್ಲೆಯ ಕುಮ್ಟ ಹೊನ್ನಾವರ, ಕಾರವಾರ, ಅಂಕೋಲಾ, ಹಳಿಯಾಳ, ಹಾಗೂ ಭಟ್ಕಳ ತಾಲೂಕಿನಲ್ಲಿ ಗಾಳಿಯ ಜೊತೆ ಭಾರಿ ಮಳೆ ಆಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಕೃಷಿಗೆ ಹಾನಿಯಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನ ಬಳಿ ಗುಡ್ಡ ಕುಸಿದು ನಾಲ್ಕು ದಿನ ಆದರೂ ಕಾರ್ಯಾಚರಣೆ ಇನ್ನೂ ಪೂರ್ಣವಾಗಲಿಲ್ಲ ಸುರಿಯುತ್ತಿರುವ ಮಳೆ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿದೆ ಹಾಗೆ ನದಿ ನೀರಿನ ಮಟ್ಟ ಏರುತ್ತಿದ್ದು ಮಳೆ ಸುರಿಯುತ್ತಿರುವುದರಿಂದ ಗುಡ್ಡ ಇನ್ನು ಜರಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡವರಿ
ಗ್ರಾಮದ ಸೋಮೇಶ್ವರದ ಬಳಿ ಗುಡ್ಡ ಕುಸಿವ ಆತಂಕ ಎದುರಾಗಿದೆ ಸುರಿಯುತ್ತಿರುವ ಬಾರಿ ಮಳೆಯಿಂದ ಗುಡ್ಡ ಜರುಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿ ಸಮಸ್ಯೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ ಗುಡ್ಡ ಕುಸಿಯುವ ಸಾಧ್ಯತೆ ಇದೆ, ಇದರ ಬಗ್ಗೆ ಗಮನಹರಿಸಿ ಎಂದು ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಗೆ ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಿರು ಸೇತುವೆಗಳು ಕೊಚ್ಚಿ ಹೋಗಿದ್ದು ಹಾಗೆ ಕೃಷಿ ಭೂಮಿಗಳಿಗೆ ನೆರೆ ನೀರು ನುಗ್ಗಿ ಅಪಾರ ಪ್ರಮಾಣದ ಬತ್ತದ ಕೃಷಿ ನಾಶವಾಗಿದೆ ಇನ್ನು ತಗ್ಗು ಪ್ರದೇಶಗಳಿಗೆ ನೆರೆ ನೀರು ನುಗ್ಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ .
ಇನ್ನು ಸುರಿಯುತ್ತಿರುವ ಗಾಳಿ ಮಳೆಯಿಂದ ಕೊಡಗು ಜಿಲ್ಲೆಯ
ಗಾಳಿ ಮಳೆಗೆ ಹಲವೆಡೆ ಮರಗಳು ನೆರಲಕ್ಕುರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗಾಳಿ ಮಳೆ ಹೆಚ್ಚಿರುವುದರಿಂದ ಜಿಲ್ಲೆಯ 5 ತಾಲೂಕಿನಲ್ಲೂ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ
ಹಾಗೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದ್ದು ಸಹಾಯವಾಣಿಯು ಕೂಡ ನೀಡಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 80ಕ್ಕೂ ಅಧಿಕ ಪ್ರದೇಶಗಳಲ್ಲಿ ಸಣ್ಣ ಸಣ್ಣ ಭೂಕುಸಿತ ಗೋಡೆ ಕುಸಿತ ಹಾಗೂ ಸೇತುವೆಗಳು ಕುಸಿತ ಉಂಟಾಗಿದೆ ಎಂದು ಹೇಳಲಾಗುತ್ತಿದೆ ಜಿಲ್ಲಾ ಆಡಳಿತ ಸೂಕ್ತ ಕ್ರಮಗಳನ್ನು ಕೂಡ ವಹಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ,ಬಂದಾರು ಗ್ರಾಮದ ಕುಂಟಾಲಪಲ್ಕೆ ಸೇತುವೆ ಬಳಿ ಕಲ್ಲರ್ಬಿ ಹತ್ತಿರ ಗುಡ್ಡ ಕುಸಿದು ರಸ್ತೆಗೆ ಬಿದ್ದಿದ್ದು ರಸ್ತೆ ಬಂದ್ ಆಗಿದೆ.
ಇನ್ನು ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆಗೆ ಬಹುತೇಕ ಜಲಾಶಯಗಳು ಈಗಾಗಲೇ ತುಂಬಿದೆ ಹಾಗೆ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ
ರಾಜ್ಯದ ಅರ್ಧದಷ್ಟು ಜಿಲ್ಲೆಯಲ್ಲಿ ಪುನರ್ವಸು ಮಳೆ ಭಾರೀ ಆವಾಂತರವನ್ನು ಸೃಷ್ಟಿಸುತ್ತಿದೆ. ಕುಂಭದ್ರೋಣ ಮಳೆಯಿಂದಾಗಿ ಜೀವನದಿಗಳು ಅಪಾಯದ ಮಟ್ಟದತ್ತ ಸಾಗುತ್ತಿದೆ. ಜಲಾಶಯಗಳು ಭರ್ತಿ ಆಗುತ್ತಿದೆ. ಕೆರೆಕಟ್ಟೆಗಳು ತುಂಬಿ ತುಳುಕುತ್ತಿದೆ.