ಸನಾತನ ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಸಾಧನೆಗಾಗಿ ಹಾಗೂ ಮೋಕ್ಷಕ್ಕಾಗಿ ತೀರ್ಥಯಾತ್ರೆಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಮಾಡುವಂಥದ್ದು ಹಾಗೂ ಯಾತ್ರೆ ಮಾಡುವಂಥದ್ದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಂತಹ ಪದ್ಧತಿ
ಉದಾಹರಣೆ ಕಾಶಿ ಯಾತ್ರೆ ಮಾಡಿದರೆ ಕಾಶಿ ವಿಶ್ವನಾಥನ ದರ್ಶನ ಮಾಡಿದರೆ ಜೀವನದಲ್ಲಿ ಮಾಡಿದ ಎಲ್ಲ ಪಾಪಗಳು ನಾಶವಾಗಿ ವಿಶ್ವನಾಥ ಮುಕ್ತಿ ಮಾರ್ಗವನ್ನು ತೋರಿಸುತ್ತಾನೆ ಎಂದು ನಂಬಿಕೆ
ಹಾಗೆ ನಮ್ಮಲ್ಲಿ ಮೋಕ್ಷದಾಯಕ ಸಪ್ತ ಕ್ಷೇತ್ರಗಳು ಕೂಡ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಏಳು ಕ್ಷೇತ್ರಗಳನ್ನು ದರ್ಶನ ಮಾಡಿದರೆ ಭಗವಂತನ ನಿತ್ಯ ನಿವಾಸವನ್ನ ಸೇರಬಹುದು ಎಂದು ಹೇಳಲಾಗಿದೆ ಅದೇ ರೀತಿಯ ಒಂದು ಮುಕ್ತಿಯನ್ನು ನೀಡುವ ದೇವಾಲಯದ ಈ ಲೇಖನದಲ್ಲಿ ನೋಡೋಣ.
ನೇಪಾಳದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ತನ್ನೊಡಲಲ್ಲಿ ಇಟ್ಟುಕೊಂಡು ನೂರಾರು ಜನ ಸಾಧಕರಿಗೆ ಆಧ್ಯಾತ್ಮಿಕ ಹಾದಿಯನ್ನು ತೋರಿಸಿದ ದೇವಾಲಯ ಶ್ರೀ ಮುಕ್ತಿನಾಥ ದೇವಾಲಯ
ಮುಕ್ತಿನಾಥ ದೇವಾಲಯ ಸನಾತನ ಹಿಂದೂ ಧರ್ಮದ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಮೋಕ್ಷದಾಯಿಕ ಸ್ಥಳ ಎಂದು ಕರೆಯುತ್ತಾರೆ.ಹಿಂದೂ ಧರ್ಮದ 51 ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಮುಕ್ತಿನಾಥ ದೇವಾಲಯವು ಗಂಡಕಿ ಶಕ್ತಿ ಪೀಠ ಎಂದು ಪ್ರಸಿದ್ಧವಾಗಿದೆ. ನೇಪಾಳದ ಗಂಡಕಿ ನದಿಯ ಮೂಲದಲ್ಲಿರುವ ಬೆಟ್ಟದ ಮೇಲೆ ಈ ದೇವಾಲಯವಿದೆ.
ಶ್ರೀ ಮಹಾವಿಷ್ಣು ಸಾಲಿಗ್ರಾಮ ರೂಪದಲ್ಲಿ ಮುಕ್ತಿನಾಥನಾಗಿ ನೆಲೆಸಿದ್ದಾನೆ, ಇದು ಆಧ್ಯಾತ್ಮಿಕ ಜ್ಞಾನೋದಯ ಮತ್ತು ಆಂತರಿಕ ಜಾಗೃತಿಯ ಸ್ಥಳವೆಂದು ಭಾವಿಸಲಾಗಿದೆ. ಭಗವಾನ್ ಶ್ರೀ ವಿಷ್ಣು ಮೂರ್ತಿ, ದೇವಿ ಶ್ರೀ ದೇವಿ ಮತ್ತು ಭೂ ದೇವಿಯು ಇಲ್ಲಿ ಜೀವನ್ ಮುಕ್ತಿಯನ್ನು ನೀಡಿದ ಕಾರಣ ಈ ಸ್ಥಳವನ್ನು ಮುಕ್ತಿನಾಥ ಎಂದು ಕರೆಯಲಾಗುತ್ತದೆ.
ಮುಕ್ತಿನಾಥ ದೇವಾಲಯ ಹತ್ತೊಂಬತ್ತನೇ ಶತಮಾನದಷ್ಟು ಹಿಂದಿನದು. ನೇಪಾಳದ ರಾಣಿ ಸಬರ್ಣ ಪ್ರಭಾ ಈ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದಳು ಎಂದು ಹೇಳಲಾಗಿದೆ.
ಮುಕ್ತಿನಾಥ ದೇವಾಲಯದ ಬಗ್ಗೆ ಸಾಕಷ್ಟು ಪುರಾಣಗಳಲ್ಲಿಯೂ ಉಲ್ಲೇಖಗಳಿದೆ ಹಾಗೂ ನೂರಾರು ಜನಸಂತರು ಮಹಾತ್ಮರು ಅವರ ಜೀವನ ಚರಿತ್ರೆಯಲ್ಲಿ ಈ ದೇವಾಲಯದ ಬಗ್ಗೆ ಉಲ್ಲೇಖಿಸಿದ್ದಾರೆ ಇಲ್ಲಿನ ಆಧ್ಯಾತ್ಮ ಮಹತ್ವ ಹಾಗೂ ಪ್ರಕೃತಿಯ ಸೌಂದರ್ಯ ಸಾಧಕನ ಮನಸ್ಸಿಗೆ ಏಕಾಗ್ರತೆಯನ್ನು ನೀಡುತ್ತದೆ ಹಾಗೂ ನಂಬಿ ಬಂದ ಭಕ್ತರಿಗೆ ಸಂತೋಷವನ್ನು ನೀಡುತ್ತದೆ
ಹಾಗೆ ಬೌದ್ಧ ಧರ್ಮದಲ್ಲಿಯೂ ಈ ಸ್ಥಳವನ್ನು ಪುಣ್ಯಕ್ಷೇತ್ರವೆಂದು ಪರಿಗಣಿಸುತ್ತಾರೆ.
ಬೌದ್ಧರು ಮುಕ್ತಿನಾಥವನ್ನು ಪ್ರಮುಖ ಯಾತ್ರಾ ಸ್ಥಳವೆಂದು ಪರಿಗಣಿಸುತ್ತಾರೆ. ಇದು ಹಿಮಾಲಯ ಪ್ರದೇಶದ 24 ತಾಂತ್ರಿಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಬೌದ್ಧರು ಇದನ್ನು ಅವಲೋಕಿತೇಶ್ವರ (ಟಿಬೆಟಿಯನ್‌ನಲ್ಲಿ ಚೆನ್‌ರೆಜಿಗ್) ದೇವತೆಯೊಂದಿಗೆ ಸಂಯೋಜಿಸುತ್ತಾರೆ, ಅವರು ಸಹಾನುಭೂತಿಯನ್ನು ಸಾಕಾರಗೊಳಿಸುತ್ತಾರೆ. ಈ ತಾಣವು ಟಿಬೆಟಿಯನ್ ಬೌದ್ಧಧರ್ಮದ ಅನುಯಾಯಿಗಳಿಗೆ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಸಮೀಪದಲ್ಲಿ ಹಲವಾರು ಮಠಗಳಿವೆ.
ಮುಕ್ತಿನಾಥ ದೇವಾಲಯವು ನೇಪಾಳದ ಮುಸ್ತಾಂಗ್ ಜಿಲ್ಲೆಯ ಥೋರಾಂಗ್-ಲಾ- ಪರ್ವತದ ಮೇಲಿದೆ. ಈ ಪರ್ವತವು ಹಿಮದಿಂದ ಆವೃತವಾಗಿ ಇರುತ್ತದೆ 3,700 ಅಡಿ ಎತ್ತರದಲ್ಲಿ ಈ ದೇವಾಲಯವಿದೆ.
ಮುಕ್ತಿನಾಥ ದೇವಾಲಯದ ಹಿಂಭಾಗದಲ್ಲಿ ನಂದಿಯ ತಲೆಯ ಆಕಾರದಿಂದ ನೀರು ಚಿಮ್ಮುತ್ತದೆ.
ಮುಕ್ತಿನಾಥ್ ದೇವಾಲಯದ ಹಿಂಭಾಗದಲ್ಲಿ ನಂದಿಯ ತಲೆಯ ಆಕಾರದಲ್ಲಿ 108 ನೀರಿನ ಚಿಲುಮೆಯಿದೆ. ಇದು ಅರ್ಧ ವೃತ್ತಾಕಾರದಲ್ಲಿ ಅರ್ಧ ಅಡಿ ಅಂತರದಲ್ಲಿ ಜೋಡಿಸಲಾಗಿದೆ. ನಂದಿಯ ಬಾಯಲ್ಲಿ ಬರುವ ನೀರು ಕಾಳಿ ನದಿಯಿಂದ ಹರಿದು ಬರುವುದು. ಈ ಚಿಲುಮೆಯಿಂದ ಹರಿದು ಬರುವ ನೀರಿನಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪ ಕರ್ಮಗಳು ತೊಳೆಯುತ್ತವೆ ಎಂಬ ನಂಬಿಕೆಯಿದೆ. ಜೊತೆಗೆ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುವುದು. ಹಾಗೂ ಆಧ್ಯಾತ್ಮದ ಪರಮ ಧ್ಯಾನವೇ ಆಗುತ್ತದೆ ಎಂದು ಹೇಳಲಾಗುತ್ತದೆ. ಚರ್ಮರೋಗ ಅನಾರೋಗ್ಯದಂತಹ ಅನೇಕ ಸಮಸ್ಯೆಗಳು ದೂರವಾಗುತ್ತದೆ.
ಮುಕ್ತಿನಾಥ ದೇವಾಲಯದ ಸ್ಥಳ ಪುರಾಣ
ಜಲಂಧರ ಎನ್ನುವ ರಾಕ್ಷಸ ಹಾಗೂ ಶಿವನ ನಡುವೆ ಯುದ್ಧ ನಡೀತಾ ಇರುತ್ತದೆ ಜಲಂಧರನು ದುಷ್ಟಮನಸ್ಸಿನವನಾಗಿದ್ದ ಕಾರಣ ಅವನು ಶಿವನ ಪತ್ನಿ ಪಾರ್ವತಿ ದೇವಿಯನ್ನು ವರಿಸಲು ಶಿವನ ರೂಪ ಧರಿಸಿ ಬಂದಿದ್ದನಂತೆ. ಆದರೆ ಪಾರ್ವತಿಯು ಸೂಕ್ಷ್ಮ ಬುದ್ಧಿಯಿಂದ ಅವನು ಶಿವನಲ್ಲ ಎನ್ನುವುದನ್ನು ಕಂಡುಹಿಡಿದು ತಕ್ಷಣ ಶಿವನನ್ನು ಕೂಗಿದಳು. ಆಗ ಶಿವನು ಜಲಂಧರನ ಜೊತೆಗೆ ಯುದ್ಧಕ್ಕಿಳಿದ. ಆ ರಾಕ್ಷಸನ ಅನುಯಾಯಿಗಳು ಇತರ ದೇವತೆಗಳಿಗೂ ತೊಂದರೆಯನ್ನು ನೀಡಲು ಮುಂದಾದರು. ಆಗ ವಿಷ್ಣು ದೇವನು ಜಲಂಧರನ ರೂಪವನ್ನು ಧರಿಸಿ ಅವನ ಹೆಂಡತಿ ವೃಂದಳನ್ನು ಒಲಿಸಿಕೊಂಡನು. ವೃಂದ ತನ್ನ ಗಂಡ ಎಂದೇ ವಿಷ್ಣು ದೇವನನ್ನು ಭಾವಿಸಿದಳು. ಪಾಪ ವೃಂದೆಗೆ ಬಂದವನು ವಿಷ್ಣು ಅಂತ ಗೊತ್ತಾಗಲಿಲ್ಲ! ಅತ್ತ ಶಿವನು ಜಲಂಧರನನ್ನು ವಧಿಸಿದನು.
ಗಂಡನಲ್ಲ ಎಂಬ ಸತ್ಯವನ್ನು ತಿಳಿದ ವೃಂದಾ ವಿಷ್ಣು ದೇವರಿಗೆ ಕಲ್ಲಾಗುವಂತೆ ಶಪಿಸಿದಳು. ಇದರಿಂದಾಗಿ ವಿಷ್ಣು ದೇವರು ಮುಕ್ತಿನಾಥ್ ಪ್ರದೇಶದಲ್ಲಿ ಸಾಲಿಗ್ರಾಮವಾಗಿ ಜನ್ಮ ಪಡೆದನು. ಶಾಪ ನೀಡಿದ ವೃಂದಾ ತನ್ನನ್ನು ತಾನು ಶಪಿಸಿಕೊಂಡು ಭಸ್ಮವಾದಳು.
ಸಾಮಾನ್ಯ ದಿನಗಳಲ್ಲೂ ತಾಪಮಾನ 7 ಡಿಗ್ರಿಗಿಂತ ಕಡಿಮೆ ಇರುತ್ತದೆ. ಹಾಗಾಗಿ ಸುತ್ತ ಇರುವ ಅನ್ನಪೂರ್ಣ ಬೆಟ್ಟಸಾಲು ರಾತ್ರಿಯ ಚಳಿಗೆ ಹಿಮಾಚ್ಛಾದಿತವಾಗುತ್ತದೆ. ಬೆಳಗ್ಗೆದ್ದು ನೋಡಿದರೆ ಆ ಬೆಟ್ಟಸಾಲುಗಳಲ್ಲಿ ಶೇಖರವಾದ ಅಪಾರ ಹಿಮ ಗುಡ್ಡೆಗಳ ಮೇಲೆ ಸೂರ್ಯ ರಶ್ಮಿ ಬಿದ್ದೊಡನೆಯೇ ಬಂಗಾರದ ಹೊಂಬಣ್ಣದಲ್ಲಿ ಮಿಂದೆದ್ದ ಎವೆರೆಸ್ಟ್ ದರ್ಶನ ನಮ್ಮದಾಗುತ್ತದೆ. (ರಾಗಿ, ಅಕ್ಕಿ, ಗೋಧಿಗಳಿಂದ ಮನೆ ಮನೆಯಲ್ಲೂ ನೇಪಾಳದಲ್ಲಿ ಮದ್ಯ ತಯಾರಿಸುತ್ತಾರೆ. ಇಲ್ಲಿ ಕುಡಿತ ಮತ್ತು ಜೂಜು ಸರ್ವೇ ಸಾಮಾನ್ಯ. ಯಾವ ನಿಯಂತ್ರಣಗಳೂ ಇಲ್ಲ. ಜೊತೆಗೆ ಡ್ಯಾನ್ಸ್ ಬಾರುಗಳೂ, ಕ್ಯಾಸಿನೋಗಳೂ ತೀರ ಸಾಮಾನ್ಯ.)
ಗಂಗೋತ್ರಿ, ಯಮುನೋತ್ರಿ, ಕೇದಾರಗಳನ್ನು ಕಂಡವರಿಗೆ ಮುಕ್ತಿನಾಥ್ ಅಷ್ಟೇನೂ ತ್ರಾಸದಾಯಕವಲ್ಲ. ಜೀಪ್ ಅಥವ ಬಸ್ಸಿನಲ್ಲಿ ಹೋಗಿಬರಬಹುದು. ಕುದುರೆ ಬಳಸಿದರೆ ನಡೆಯುವ ಪ್ರಮೇಯವೇ ಇಲ್ಲ. ಆದರೆ ಹಿಮಾಚ್ಛಾದಿತ ಬೆಟ್ಟಸಾಲುಗಳಲ್ಲಿ ಕರಗಿ ಹರಿಯುವ ಗಂಡಕಿ ನದಿಯ ವಿವಿಧ ಜಲಪಾತಗಳನ್ನು ಕಾಣುತ್ತಲೇ ಕೊರಕಲು ಭರಿತ ರಸ್ತೆಗಳಲ್ಲಿ ಕ್ರಮಿಸುವುದು ರುದ್ರ ರಮಣೀಯ ಅನುಭವವೇ ಹೌದು.
ಸುಂದರ ಮನೋಹರ ವಾದಂತಹ ಈ ದೇವಾಲಯ ಹಿಂದೂ ಧರ್ಮದ ಆಧ್ಯಾತ್ಮ ಜಾಗೃತಿಯನ್ನು ಮೂಡಿಸುವ ಒಂದು ಮಹತ್ವದ ಕ್ಷೇತ್ರವಾಗಿದೆ, ಒಮ್ಮೆಯಾದರೂ ಈ ಕ್ಷೇತ್ರಕ್ಕೆ ಭೇಟಿ ನೀಡಿ ಆನಂದಮಯ ಜೀವನದ ಮಹತ್ವವನ್ನು ಅರಿಯಿರಿ.