
ನಾಗ್ಪುರದಲ್ಲಿ ನಡೆದ ಹಿಟ್ & ರನ್ ಪ್ರಕರಣದ ಹಿಂದೆ ವ್ಯವಸ್ಥಿತ ಸಂಚು ಇದ್ದುದ್ದನ್ನು ಪೊಲೀಸರ ತನಿಖೆಯಲ್ಲಿ ಸಾಬೀತಾಗಿದೆ.
ನಗರ ಯೋಜನೆ ಇಲಾಖೆಯ ಸಹಾಯಕ ನಿರ್ದೇಶಕರಾಗಿರುವ ಅರ್ಚನ ಮನೀಷ್ ಪುಟ್ಟೇವಾರ್ ಅವರ ಮಾವ ಪುರುಷೋತ್ತಮ್ ಪುಟ್ಟೇವಾರ್ ಕಾರು ಅಪಘಾತದಲ್ಲಿ ನಿಧನರಾದ ಪ್ರಕರಣದಲ್ಲಿ ಆಕೆಯನ್ನು ಬಂಧಿಸಲಾಗಿದೆ.
ಮೇಲ್ನೋಟಕ್ಕೆ ಇದೊಂದು ಹಿಟ್ & ರನ್ ಪ್ರಕರಣ ಎನಿಸಿದರೂ, ನೈಜವಾಗಿ 300 ಕೋಟಿ ರೂಪಾಯಿಗಳ ಆಸ್ತಿಗಾಗಿ ಸೊಸೆ ತನ್ನ ಮಾವನನ್ನು 1 ಕೋಟಿ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಕೇಸ್ ಇದಾಗಿದೆ.
ತನ್ನ ಮಾವನ ನೂರಾರು ಕೋಟಿ ಆಸ್ತಿಗಾಗಿ ಸುಪಾರಿ ಕೊಟ್ಟು ಪ್ಲಾನಿಂಗ್ ಮಾಡಿ ಮಾವನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಒಬ್ಬರು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪಿಟಿಐ ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ, ಹಿಟ್ & ರನ್ ಪ್ರಕರಣದಂತೆ ಮಾಡಿ ಪುರುಷೋತ್ತಮ್ ಪುಟ್ಟೇವಾರ್ ಅವರನ್ನು ಹತ್ಯೆ ಮಾಡುವುದಕ್ಕಾಗಿ ಅರ್ಚನಾ ಪುಟ್ಟೇವಾರ್ 1 ಕೋಟಿ ರೂಪಾಯಿ ಖರ್ಚು ಮಾಡಿ ಒಂದಷ್ಟು ಜನರನ್ನು ನೇಮಕ ಮಾಡಿದ್ದರು. ಈ ಉದ್ದೇಶಕ್ಕಾಗಿಯೇ ಹಳೆಯ ಕಾರನ್ನು ಖರೀದಿ ಮಾಡುವುದಕ್ಕೆ ಆರೋಪಿಗಳಿಗೆ ಅರ್ಚನಾ ಹಣಕಾಸು ನೆರವು ನೀಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.
ಮಹಿಳೆ ತನ್ನ ಗಂಡನ ಚಾಲಕ ಬಾಗ್ಡೆ ಮತ್ತು ಇತರ ಇಬ್ಬರು ಆರೋಪಿಗಳ ಜೊತೆ ಸೇರಿ ಹತ್ಯೆಗೆ ಸಂಚುರೂಪಿಸಿದ್ದಾರೆ ಪೊಲೀಸರು ಅವರ ವಿರುದ್ಧ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯಡಿ ಕೊಲೆ ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಎರಡು ಕಾರು, ಚಿನ್ನಾಭರಣ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪುರುಷೋತ್ತಮ ಪುಟ್ಟೇವಾರ್ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಪತ್ನಿ ಶಕುಂತಲಾ ಅವರನ್ನು ಭೇಟಿಯಾಗಲು ಆಸ್ಪತ್ರೆಗೆ ತೆರಳಿದ್ದರು ಆಸ್ಪತ್ರೆಯಿಂದ ಹಿಂತಿರುಗುವಾಗ, ಕಾರು ಅವರ ಮೇಲೆ ಹರಿದಿದೆ. ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಆದರೆ ಸೊಸೆ ತಿಳಿದುಕೊಂಡಂತೆ ಪುರುಷೋತ್ತಮ್ ಅವರ ಬಳಿ 300 ಕೋಟಿ ಆಸ್ತಿ ಇರಲಿಲ್ಲ. ಅವರ ಸಂಪತ್ತಿನ ಮೌಲ್ಯ ಸುಮಾರು 20- 22 ಕೋಟಿ ರೂ ಇರಬಹುದು ಎಂದು ನಾಗಪುರ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದ್ದಾರೆ. ಮೇ ತಿಂಗಳಲ್ಲಿ ಅವರ ಹತ್ಯೆಗೆ ಎರಡು ಬಾರಿ ಪ್ರಯತ್ನ ನಡೆದಿತ್ತು. ಒಂದು ಘಟನೆಯಲ್ಲಿ ಅವರು ಸಣ್ಣಪುಟ್ಟ ಗಾಯಕ್ಕೆ ಒಳಗಾಗಿದ್ದರು.