
ಬೆಂಗಳೂರು : ಹಾಸನದ ಹಾಲಿ ಸಂಸದ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಅವರದ್ದು ಎಂದು ಆರೋಪಿಸಲಾಗಿರುವ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದ್ಯಂತ ಸದ್ದು ಮಾಡುತ್ತಿದೆ. ಈಗಾಗಲೇ ಅವರು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ.
ಪ್ರಕರಣದ ತನಿಖೆಗೆ ಎಸ್ಐಟಿ ರಚನೆಯಾದ ಬೆನ್ನಲ್ಲೆ ಅವರ ಅಮಾನತಿಗೆ ಪಕ್ಷದಲ್ಲೇ ಒತ್ತಡ ಕೇಳಿ ಬಂದಿದೆ.
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಗುರುಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಪತ್ರ ಬರೆದು, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ .
ಜಾತ್ಯತೀತ ನೆಲೆಗಟ್ಟಿನ ಮೇಲೆ ಪಕ್ಷವನ್ನು ಕಟ್ಟಿದ್ದೀರಿ. ಪಕ್ಷದ ಚಿಹ್ನೆಯು ಭತ್ತ ಹೊತ್ತ ಮಹಿಳೆಯಾಗಿದ್ದು, ನಿಮಗೆ ಮಹಿಳೆಯರ ಮೇಲಿರುವ ಗೌರವವನ್ನು ಇದು ಪ್ರತಿನಿಧಿಸುತ್ತದೆಂದು ಎಲ್ಲರೂ ಭಾವಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಪರಂಪರೆಯನ್ನು ಹೊಂದಿರುವ ಪಕ್ಷಕ್ಕೆ ವಿಡಿಯೊ ಪ್ರಕರಣ ತೀವ್ರ ಮುಜುಗರ ತಂದಿರುವುದಂತೂ ಸುಳ್ಳಲ್ಲ. ಈಗಾಗಲೇ ಸರ್ಕಾರ ಈ ಪ್ರಕರಣವನ್ನು ಎಸ್.ಐ.ಟಿಗೆ ಒಪ್ಪಿಸಿದ್ದಾರೆ. ತಾವು ಪಕ್ಷದ ಆಂತರಿಕ ಸಮಿತಿಯನ್ನು ರಚನೆ ಮಾಡಿ, ಆ ಸಮಿತಿ ವಿಡಿಯೊ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ಗೊತ್ತು ಮಾಡುವಂತಾಗಲಿ, ಅಲ್ಲಿಯವರೆಗೆ ಪಕ್ಷದ ಮುಜುಗರವನ್ನು ತಪ್ಪಿಸಲು ಮತ್ತು ಎರಡನೇ ಹಂತದ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಿರಲು ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲು ತಮ್ಮಲ್ಲಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.
ನಾನು ತುಂಬಾ ಕಿರಿಯ, ಅತ್ಯಂತ ಹಿರಿಯರಾದ ತಮಗೆ ಸಲಹೆ ಕೊಡುವಷ್ಟು ದೊಡ್ಡವನ್ನಲ್ಲ. ಆದರೆ, ಪರಿಸ್ಥಿತಿ ಹಾಗೆ ಬಂದೊದಗಿದೆ. ಹೀಗಾಗಿ ತಮಗೆ ನಾನು ಪತ್ರ ಬರೆದು ನನ್ನ ಅಂತರಾಳದ ಅಭಿಪ್ರಾಯಗಳನ್ನು ಮುಕ್ತಮನಸ್ಸಿನಿಂದ ವ್ಯಕ್ತಪಡಿಸುತ್ತಿರುವೆ ಎಂದಿದ್ದಾರೆ.