
ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿದೆ.
ಆದರೆ ಅಭಿಮಾನದ ಅಮಲಿನಲ್ಲಿ ಈ ಡಿ ಗ್ಯಾಂಗ್ ನ ಜೊತೆ ಸೇರಿ ಮಾಡಬಾರದ ಕೃತ್ಯ ಮಾಡಿ ಕಂಬಿ ಹಿಂದೆ ಸೇರಿರುವ ಕೆಲವು ಆರೋಪಿಗಳ ಕುಟುಂಬದ ಪರಿಸ್ಥಿತಿ ಹೇಳತಿರದು,
ಔಷಧಿ ತರಲು ಹಣವಿಲ್ಲ ವಕೀಲ ರನ್ನ ನೇಮಕ ಮಾಡಲು ಹಣವಿಲ್ಲ ಕಷ್ಟದ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿರುವ ಈ ಆರೋಪಿಗಳ ಕುಟುಂಬದವರ ಸ್ಥಿತಿ,
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಡಿ ಗ್ಯಾಂಗ್ ಜೊತೆ ಕಂಬಿಹಿಂದೆ ಸೇರಿರೋ ಜಗ್ಗ ಅಲಿಯಾಸ್ ಜಗದೀಶ್ ಯಾರ ತಂಟೆಗೂ ಹೋಗದೇ ನಿತ್ಯ ಆಟೋ ಓಡಿಸ್ಕೊಂಡು ಕೆಲಸಕ್ಕೆ ಹೋಗಿ 800 ರೂಪಾಯಿ ತಗೊಂಡು ಮನೆಗೆ ಬರ್ತಿದ್ನಂತೆ. ಆ 800 ರೂಪಾಯಿಯಲ್ಲೇ ಮನೆಯವರ ಊಟ, ಔಷಧಿ ಖರ್ಚು ಎಲ್ಲವೂ ನಡೀತಿತ್ತಂತೆ. ಅಲ್ಲದೇ, ಜಗದೀಶನ ತಾಯಿಗೆ ನರದ ತೊಂದರೆ ಇದೆಯಂತೆ. ಅದಕ್ಕಾಗಿ ಮಾತ್ರೆ, ಔಷಧಿಯನ್ನೂ ಜಗದೀಶ ತಂದುಕೊಂಡಿದ್ನಂತೆ. ಆದ್ರೀಗ ತಾನು ಮಾತ್ರೆ ನುಂಗದಿದ್ರೂ ಪರ್ವಾಗಿಲ್ಲ, ನೋವು ಅನುಭವಿಸಿಕೊಂಡೇ ಇದ್ದುಬಿಡ್ತೀನಿ ಎಂದು ಜಗದೀಶ್ ತಾಯಿ ಕಣ್ಣೀರು ಹಾಕಿದ್ದಾರೆ.
ಈ ಜಗದೀಶ ತನ್ನ ಆಟೋ ಹಿಂದೆ ನಟ ದರ್ಶನ್ನ ಫೋಟೋ ಹಾಕ್ಕೊಂಡಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಆ ಆಟೋ ಕೂಡ ಈಗ ಸೀಜ್ ಆಗಿದೆ. ದರ್ಶನ್ನಾಗಿ ಜೈಲಿಸೇರಿರೋ ಮಗನನ್ನು ನೋಡಿಕೊಂಡು ಧೈರ್ಯ ತುಂಬಿ ಬರೋಣ ಅಂದ್ರೂ ಈ ತಾಯಿಯ ಬಳಿ ದುಡ್ಡಿಲ್ಲವಂತೆ. ಇನ್ನು, ತನ್ನ ಮಗನ ಪರವಾಗಿ ಲಾಯರ್ ನೇಮಿಸೋಕೆ, ಮಗನನ್ನು ಬೇಲ್ ಮೇಲೆ ಬಿಡಿಸೋಕೆ ಖರ್ಚು ಮಾಡೋಕೆ ದುಡ್ಡು ಎಲ್ಲಿಂದ ಹುಟ್ಟಬೇಕು. ನಮ್ ಮನೆಯ ಪರಿಸ್ಥಿತಿ ನೋಡಿದ್ರೆ ನೇಣು ಹಾಕ್ಕೋಬೇಕು ಅನಿಸುತ್ತೆ ಎಂಬ ಜಗದೀಶನ ಸಹೋದರ ಕಣ್ಣೀರು ಹಾಕಿದ್ದಾನೆ.
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಏಳನೇ ಆರೋಪಿಯಾಗಿ ಅನುಕುಮಾರ ಜೈಲುಸೇರಿದ್ದಾನೆ. ಈತ ಚಿತ್ರದುರ್ಗದಲ್ಲಿ ಆಟೋ ಓಡಿಸಿಕೊಂಡು ಬಂದ ಅಲ್ಪ ಸ್ಪಲ್ಪ ಹಣದಲ್ಲೇ ಜೀವನ ನಡೆಸುತ್ತಿದ್ದ. ಈತನ ಬಂಧನದ ಬಳಿಕ ಆಘಾತಗೊಂಡಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ಮತ್ತು ತನ್ನ ಗಂಡನನ್ನು ಕಳೆದುಕೊಂಡಿರೋ ಈ ತಾಯಿಯ ಕಣ್ಣೀರು ನೋಡಿದ್ರೆ ಎಂಥವರ ಕಣ್ಣಲ್ಲು ನೀರು ಬರುತ್ತದೆ. ದರ್ಶನ್ನಿಂದಾಗಿ ಈ ತಾಯಿಯ ಮಗ ಜೈಲುಪಾಲಾಗಿದ್ರೆ. ಇವರ ಪತಿಯ ಸಾವಿಗೂ ದರ್ಶನ್ ಪರೋಕ್ಷವಾಗಿ ಕಾರಣರಾಗಿದ್ದಾರೆ. ಅನುಕುಮಾರ ಈ ಕೇಸ್ನಲ್ಲಿ ನೇರವಾಗಿ ಭಾಗಿಯಾಗಿಲ್ಲ ಎನ್ನಲಾಗುತ್ತಿದ್ರೂ ಆತ ತಗ್ಲಾಕ್ಕೊಂಡಿದ್ದಾನೆ. ಅವರಿವರ ಮನೆಯಲ್ಲಿ ಕೆಲಸ ಮಾಡಿ ಮಕ್ಕಳನ್ನು ಬೆಳೆಸಿದ್ದೇ ಎಂದು ಗೋಳಾಡುತ್ತಿರೋ ಅನುಕುಮಾರನ ತಾಯಿಯ ಕಣ್ಣೀರು ಹಾಕಿದ್ದಾರೆ.
ಇನ್ನು, ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಡಿಗ್ಯಾಂಗ್ ಜೊತೆ ಜೈಲು ಸೇರಿರೋ ಐದನೇ ಆರೋಪಿ ನಂದೀಶನ ಕುಟುಂಬ. ಈ ಕುಟುಂಬ ಇರೋ ಸ್ಥಿತಿಯೇ ಎಲ್ಲವನ್ನೂ ಹೇಳುತ್ತೆ. ಅಸಲಿಗೆ ಆರೋಪಿ ನಂದೀಶ ಮರ್ಯಾದೆಗೆ ಅಂಜಿ ಬದುಕುತ್ತಿದ್ದನಂತೆ. ಮಂಡ್ಯ ತಾಲೂಕಿನ ಚಾಮಲಾಪುರ ಗ್ರಾಮದ ನಿವಾಸಿಯಾಗಿರೋ ನಂದೀಶನ ಕುಟುಂಬಸ್ಥರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ 8 ವರ್ಷಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಕೇಬಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಂದೀಶ ಈಗ ಕೊಲೆ ಕೇಸ್ನಲ್ಲಿ ದರ್ಶನ್ ಗ್ಯಾಂಗ್ ಜೊತೆ ಬಂಧನವಾಗಿದ್ದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಮೊದಲೇ ಕಷ್ಟದ ಜೀವನ ಸಾಗಿಸ್ತಿದ್ದ ನಂದೀಶನ ಕುಟುಂಬವೀಗ ಮನೆ ನಿಭಾಯಿಸೋಕೆ ಪರದಾಡುವಂತಾಗಿದೆ. ನಂದೀಶ್ ತಾಯಿಗೆ ಅಸ್ತಮಾ ಕಾಯಿಲೆ ಇದ್ದು ಇದಕ್ಕೆ ಚಿಕಿತ್ಸೆ ಪಡೆಯಲು ಹೆಣಗಾಡುವಂತಾಗಿದೆ. ಜೈಲಲ್ಲಿರೋ ಅಣ್ಣನನ್ನು ನೋಡಿಕೊಂಡು ಬರೋಣ ಅಂದ್ರೂ ದುಡ್ಡಿಲ್ಲ ಸ್ವಾಮಿ ಅಂತ ನಂದೀಶ್ ಸಹೋದರಿ ಕಣ್ಣೀರಾಗಿದ್ದಾರೆ. ಮಂಡ್ಯದ ನಂದೀಶ್ ಕುಟುಂಬಕ್ಕೆ ಬೆಂಗಳೂರಿಗೆ ಬಂದು ಜೈಲಲ್ಲಿರೋ ಮಗನ ಮುಖ ನೋಡಿಕೊಂಡು ಹೋಗೋದಕ್ಕೂ ದುಡ್ಡಿಲ್ಲ ಎಂದು ಕೊರಗುತ್ತಿದ್ದಾರೆ.
ಕಷ್ಟಪಟ್ಟು ದುಡಿದು ಜೀವನ ನಡೆಸುತ್ತಿರುವವರು ಇಂದು ಅಭಿಮಾನದ ಅಮಲಿನಲ್ಲಿ ಕುಟುಂಬಸ್ಥರ ಕಣ್ಣಲ್ಲಿ ನೀರು ಹಾಕಿಸಿ ಜೈಲು ಸೇರಿದ್ದಾರೆ, ಅಭಿಮಾನ ಇರಬೇಕು ಅದು ಅತಿರೇಕವಾಗಬಾರದು ನಿಮಗೂ ಒಂದು ಕುಟುಂಬ ಸಂಸಾರ ಇದೆ ಅನ್ನೋದು ಮರೆಯಬಾರದು.