
ಸೌಪರ್ಣಿಕೆ ಸರ್ವ ಮಂಗಳ ಸ್ವರೂಪಿ ತಾಯಿ ಮೂಕಾಂಬಿಕೆ ಸನ್ನಿಧಿ ಇರುವುದು ಇದೇ ಸೌಕರ್ಣಿಕ ದಡದ ತೀರದಲ್ಲಿ ಸಹಸ್ರಾರು ಭಕ್ತರು ಸೌಪರ್ಣಿಕೆಯಲ್ಲಿ ಮಿಂದು ತಾಯಿ ಮೂಕಾಂಬಿಕೆಯ ದರ್ಶನವನ್ನ ಪಡೆಯುತ್ತಾರೆ. ನೂರಾರು ಜೀವರಾಶಿಗಳಿಗೆ ಜೀವನದಿ ಆಗಿರುವ ಸೌಪರ್ಣಿಕೆ ಇಂದು ಮಾನವನ ಸ್ವಾರ್ಥಕ್ಕೆ ಕಲುಷಿತಗೊಂಡಿದ್ದಾಳೆ.
ಒಂದು ಉಲ್ಲೇಖಗಳ ಪ್ರಕಾರ ರಾಮಾಯಣದಲ್ಲಿ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಸಿಕ್ಕಿ ಲಕ್ಷ್ಮಣ ಮೂರ್ಚೆತಪ್ಪಿ ಬೀಳುತ್ತಾನೆ ಆಗ ಲಕ್ಷ್ಮಣ ನನ್ನು ಉಳಿಸಲು ಹನುಮಂತ ಸಂಜೀವಿನ ಪರ್ವತ ಹೊತ್ತು ತರುತ್ತಾನೆ. ಹಾಗೆ ಹೊತ್ತು ತರುವ ಸಂಜೀವಿನಿ ಪರ್ವತದ ಒಂದು ತುಂಡು ಕೆಳಕ್ಕೆ ಬಿದ್ದು ಅದುವೇ ಕೊಡಚಾದ್ರಿ ಪರ್ವತವಾಯಿತು ಎನ್ನುವ ಪ್ರತೀತಿ ಇದೆ… ಅಂತಹ ಕೊಡಚಾದ್ರಿಯ ಒಡಲಿನಲ್ಲಿ ಹುಟ್ಟಿ ಹರಿಯುವ ಸೌಪರ್ಣಿಕೆ ಹಿಮಾಲಯದಿಂದ ಹರಿಯುವ ಉತ್ತರದ ಗಂಗೆಯಷ್ಟೇ ಔಷಧೀಯ ಗುಣಗಳನ್ನು ಹೊಂದಿದ್ದಾಳೆ ಎನ್ನಲಾಗುತ್ತದೆ.
ಹಾಗೆ ಕೇರಳ ಭಕ್ತರ ನಂಬಿಕೆಯ ಪ್ರಕಾರ ಕಂಹಾಸುರ ತನಗೆ ಗಂಡು ಜೀವಿಗಳಿಂದ ಮರಣಬಾರದ ವರ ಪಡೆಯುವ ಸಲುವಾಗಿ ಕೊಡಚಾದ್ರಿಯ ಗುಹೆಯೊಂದರಲ್ಲಿ ತಪಸ್ಸನ್ನು ಆಚರಿಸುತ್ತಾನಂತೆ. ಆಗ ಆತನ ಭಕ್ತಿಗೆ ಮೆಚ್ಚಿ ಬ್ರಹ್ಮಾದೇವ ಪ್ರತ್ಯಕ್ಷನಾಗುತ್ತಾನೆ, ಬ್ರಹ್ಮದೇವ ಪ್ರತ್ಯಕ್ಷವಾದರೂ ಕಣ್ಣುಬಿಡದ ಕಂಹಾಸುರನನ್ನು ಎಚ್ಚರಿಸಲು ಬ್ರಹ್ಮದೇವ ತನ್ನ ಕಮಂಡಲದಲ್ಲಿರುವ ನೀರನ್ನು ಎರಚುತ್ತಾನಂತೆ ಹಾಗೆ ಬ್ರಹ್ಮದೇವನ ಕಮಂಡಲದಿಂದ ಬಿದ್ದ ನೀರೆ ಮುಂದೆ ಚಿತ್ರಮೂಲವಾಗಿ ಹರಿದು ಸೌಪರ್ಣಿಕೆಯಾಗಿ ಪ್ರಸಿದ್ದಿಯಾಗುತ್ತಾಳಂತೆ.

ಅಲ್ಲದೆ ಸ್ಥಳಿಯರ ನಂಬಿಕೆಯ ಪ್ರಕಾರ ಸುಪರ್ಣ ಎನ್ನುವ ಗರುಡ ಅತ್ಯಂತ ಭೀಕರವಾದ ಖಾಯಲೆಗೆ ತುತ್ತಾಗಿ ಗುಣಮುಖವಾಗುವುದಕ್ಕೆ ಅಶ್ವಿನಿ ದೇವತೆಗಳನ್ನು ಕುರಿತು ತಪಸ್ಸನ್ನಾಚರಿಸುತ್ತಾನಂತೆ ಆತನ ತಪಸ್ಸಿಗೆ ಮೆಚ್ಚಿ ಅಶ್ವನಿ ದೇವತೆಗಳು 64 ಗಿಡಮೂಲಿಕೆಗಳನ್ನೊಳಗೊಂಡ ತೀರ್ಥವನ್ನು ಕೊಡಚಾದ್ರಿಯಿಂದ ಕಳುಹಿಸಿಕೊಡುತ್ತಾರಂತೆ, ಆ ಪರಮ ಪವಿತ್ರವಾದ ಜಲವೇ ಮುಂದೆ ಸುಪರ್ಣ ಗರುಡನ ಕಾರಣದಿಂದಾಗಿ ಸೌಪರ್ಣಿಕೆ ಎಂದು ಪ್ರಸಿದ್ದಿಯಾಗಿದೆ ಎನ್ನಲಾಗುತ್ತದೆ.
ಇಷ್ಟೆಲ್ಲಾ ಐತಿಹ್ಯ ಗಳನ್ನೊಳಗೊಂಡ ಸೌಪರ್ಣಿಕೆಯಲ್ಲಿ ಮಿಂದು ತಾಯಿ ಮೂಕಾಂಬಿಕೆಯ ದರ್ಶನ ಮಾಡಿದರೆ ಎಲ್ಲಾ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆ ಅಸಂಖ್ಯಾತ ಭಕ್ತರಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಸೌಪರ್ಣಿಕೆಯಲ್ಲಿ ಸ್ನಾನ ಮಾಡಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ. ಕಾರಣ ಕೊಲ್ಲೂರಿನ ಲಾಡ್ಜ್ ಮತ್ತು ಇತರ ಕಟ್ಟಡಗಳಿಂದ ನಿತ್ಯ ಬಿಡುವ ಕೊಳಚೆ ನೀರು ನೇರವಾಗಿ ಸೌಪರ್ಣಿಕೆ ನದಿ ಸೇರಿ, ಅದು ಸೌಪರ್ಣಿಕೆಯನ್ನೇ ಮಲಿನಗೊಳಿಸಿದ್ದು ವಿಪರ್ಯಾಸ.!
ನಿತ್ಯ ಸಾವಿರಾರು ಭಕ್ತರು ಇದೇ ಸೌಪರ್ಣಿಕೆಯಲ್ಲಿ ಸ್ನಾನ ಮಾಡಿ ತಾಯಿಯ ದರ್ಶನ ಮಾಡುತ್ತಾರೆ. ಪರಮಪವಿತ್ರವಾದ ಸೌಪರ್ಣಿಕೆಯಲ್ಲಿ ಮಿಂದರೆ ನಮ್ಮ ಕೊಟಿ ಜನ್ಮದ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಕೇರಳ ಸೇರಿದಂತೆ ಅನೇಕ ಕಡೆಗಳಿಂದ ಬರುವ ಅಪಾರ ಭಕ್ತರದ್ದು. ಅಂತಹ ಭಕ್ತರಿಗೆ ಈ ರೀತಿ ಕೊಳಚೆ ನೀರಿನ ಸ್ನಾನ ಮಾಡಿಸುವುದು ಅತ್ಯಂತ ಘೋರವಾದ ಪಾಪಕ್ಕೆ ನಮ್ಮನ್ನು ಎಡೆಮಾಡಿಕೊಡುವುದಂತೂ ಸತ್ಯ.
ಹಾಗಾಗಿ ಕೊಲ್ಲೂರಿನ ಜವಬ್ದಾರಿಯುತ ನಾಗರಿಕರೂ ತಾಯಿ ಮೂಕಾಂಬೆಕೆಯ ಭಕ್ತರಾದ ನಾವು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸೌಪರ್ಣಿಕೆಯ ಸದ್ಯದ ಪರಿಸ್ಥಿತಿಯ ಕುರಿತು ಗಮನಕ್ಕೆ ತಂದು ಕೊಳಚೆ ನೀರುನಲ್ಲಿ ಸ್ನಾನ ಮಾಡದಂತೆ ಎಚ್ಚರಿಸುವುದು ಅತ್ಯಗತ್ಯ. ಇದು ಹೀಗೆ ಮುಂದುವರಿದರೆ ಹಿಂದೆ ಉತ್ತಾರಾಖಂಡದಲ್ಲಿ ಮಂದಾಕಿನಿ ನದಿ ಕೋಪಕ್ಕೆ ತುತ್ತಾಗಿ ಕೇದಾರನಾಥ ಜಲಪ್ರವಾಹ ಆದ ಹಾಗೆ ಸೌಪರ್ಣಿಕೆಯ ಕೋಪಕ್ಕೆ ತುತ್ತಾಗಿ ಕೊಲ್ಲೂರು ಸಂಪೂರ್ಣ ಮುಳುಗಡೆ ಆದರೂ ಆಶ್ಚರ್ಯ ಪಡಬೇಕಾಗಿಲ್ಲ. ಸಜ್ಜನ ಕೊಲ್ಲೂರಿನ ನಾಗರಿಕರಾದ ನಾವೆಲ್ಲಾ ಈ ಕುರಿತು ಯೋಚಿಸಲೇಬೇಕಾದ ಅಗತ್ಯ ಇದೆ. ಆದಷ್ಟು ಬೇಗ ಪಕ್ಷಾತೀತವಾಗಿ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಿ ಅಮ್ರತಸಮಾನವಾದ ಸೌಪರ್ಣಿಕೆಯನ್ನು ಮತ್ತೆ ಮೊದಲಿನಂತೆ ಪರಿಶುದ್ಧವಾಗಿಡುವ ಸಂಕಲ್ಪ ಮಾಡೋಣ.
-ವಿಶ್ವಾಸ್ ಭಟ್ ಕೊಲ್ಲೂರು