
ಹಿರಿಯಡಕ – ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಹಿರಿಯಡಕ ಸಿರಿ ಜಾತ್ರೆ ಮಹೋತ್ಸವ ಏಪ್ರಿಲ್ 23ರಿಂದ 26ರವರೆಗೆ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಧಾರ್ಮಿಕ ವಿಧಿವಿಧಾನ, ಸಂಪ್ರದಾಯದಂತೆ ಜರಗಲಿರುವುದು…!
ಹಿರಿಯಡ್ಕ ದೇವಸ್ಥಾನದಲ್ಲಿ ಮೇಷ ಹುಣ್ಣಿಮೆಯಂದು (ಈ ವರ್ಷ ಏಪ್ರಿಲ್ 23 ರಿಂದ 26 ರವರೆಗೆ ಸಿರಿಜಾತ್ರೆಯು ಮಹೋತ್ಸವ ನಡೆಯುತ್ತದೆ. ಹಿರಿಯಡ್ಕದ ಐಸಿರಿಯ ಸಿರಿಜಾತ್ರೆಯು ತನ್ನ ಸಿರಿತನದಿಂದ ಮೆರೆದಿದೆ…!!
ರಥೋತ್ಸವ – ಪ್ರತಿ ವರ್ಷ ಮೇಷ ಮಾಸದ ಹುಣ್ಣಿಮೆಯಂದು ಸಿರಿಜಾತ್ರೆ ಮತ್ತು ಮೂರನೇ ದಿನ ಬ್ರಹ್ಮರಥೋತ್ಸವ ನಡೆಯುತ್ತದೆ. ಮಹಾನ್ ಉತ್ಸವದಲ್ಲಿ ಎಳೆಯುವ ರಥವು ಬ್ರಹ್ಮರಥವಾಗಿದ್ದು, ದಕ್ಷಿಣ ಕರ್ನಾಟಕದ ಎರಡನೇ “ಅತೀ ಎತ್ತರದ ರಥ” ಎಂಬ ಖ್ಯಾತಿಯನ್ನು ಹೊಂದಿದೆ. ರಥವು ಕಲಾತ್ಮಕ ಕೆತ್ತನೆಗಳಿಂದ ಕೂಡಿದ್ದು, 4 ಬೃಹತ್ ಚಕ್ರ ಸೇರಿದಂತೆ ಒಟ್ಟು 6 ಚಕ್ರಗಳಿವೆ…!
ಈ ರಥವನ್ನ ಎಳೆಯಲು ಸಹಸ್ರಾರು ಭಕ್ತರು ಪ್ರತಿ ವರ್ಷವೂ ಊರ ಪರ ಊರಿನಿಂದ ಆಗಮಿಸುತ್ತಾರೆ…!!
ಹಿರಿಯಡ್ಕವು ಒಂದು ಅಭೂತಪೂರ್ವವಾದ ದೇವರು, ದೈವ ಮತ್ತು ಭೂತಗಳ ಸಂಗಮದ ‘ಆಲಡೆ ಸ್ಥಾನ’ ಇಲ್ಲಿ ಸಾವಿರ ಗಣಗಳು ಇರುವುದರಿಂದ ಈ ಸ್ಥಳಕ್ಕೆ ವಿಶೇಷ ಮಹತ್ವವಿದೆ…!
ಬ್ರಹ್ಮಲಿಂಗೇಶ್ವರ ಮತ್ತು ವೀರಭದ್ರ ಸ್ವಾಮಿ ಮುಖ್ಯ ದೇವರುಗಳು ಮತ್ತು ಇತರ ಪರಿವಾರದ ದೈವಗಳನ್ನು ಸಹ ಇಲ್ಲಿ ಪೂಜಿಸಲಾಗುತ್ತದೆ. ಇಲ್ಲಿನ ನಗಾರಿ ಶಬ್ದವು ಸುತ್ತಲಿನ 4 ಕಿ ಮೀ ತನಕ ಪ್ರತಿಧ್ವನಿಸುತ್ತದೆ.ಈ ದೇವಸ್ಥಾನಕ್ಕೆ ರಾಜಗೋಪುರ, ನಗಾರಿಗೋಪುರ, ಪಡುಗೋಪುರ ಎಂಬ 3 ಗೋಪುರಗಳಿಂದ ಪ್ರವೇಶವಿದೆ. ಸುಮಾರು 27ಅಡಿ ಉದ್ದದ ಧ್ವಜಸ್ತಂಭವನ್ನು ಇಲ್ಲಿ ಕಾಣಬಹುದು…!
ಸ್ಥಳ ಪುರಾಣ
ಹಿಂದಿನ ಕಾಲದಲ್ಲಿ ಬೆರ್ಮೆರ ಆರಾಧನೆ ಮಾತ್ರವಿತ್ತು. ಪಂಚಶಕ್ತಿಗಳಾದ ಬೆರ್ಮರು, ನಾಗ, ರಕ್ತೇಶ್ವರಿ,ಕ್ಷೇತ್ರಪಾಲ ಮತ್ತು ಮಹಿಷಂತಾಯನ ಉಪಾಸನೆ ಇಲ್ಲಿ ಆರಂಭದಲ್ಲಿತ್ತು. ಆಗ ಇಲ್ಲಿ ವೀರಭದ್ರ ದೇವರು ಇರಲಿಲ್ಲ.ವೀರಭದ್ರ ಇಲ್ಲಿಗೆ ಬಂದ ಹಿನ್ನೆಲೆ ರೋಚಕವಾಗಿದೆ. ಈ ದೇವಾಲಯದಿಂದ ಕೆಲವೇ ದೂರದಲ್ಲಿರುವ ಪಡುಭಾಗ ಬೀಡಿನ ಆಳ್ವಹೆಗಡೆಯವರು ಈ ಬ್ರಹ್ಮಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದರು. ಈ ಪಂಚಶಕ್ತಿಗಳ ಆರಾಧನೆಗೆ ಅಡಕತ್ತಾಯ ಎಂಬ ಓರ್ವ ಬ್ರಾಹ್ಮಣ ಅರ್ಚಕರಿದ್ದರು. ಪ್ರತೀ ದಿನ ಬ್ರಹ್ಮಸ್ಥಾನದಲ್ಲಿ ಪೂಜೆ ನಡೆಸಿ ಬ್ರಹ್ಮರ ಪ್ರಸಾದವನ್ನು ಬೀಡಿನ ಹೆಗಡೆಗೆ ಕೊಟ್ಟು ಬರುವುದು ಇವರ ದಿನಚರಿಯಾಗಿತ್ತು. ಬೆರ್ಮರ ಪ್ರಸಾದ ಸ್ವೀಕರಿಸದೆ ಆಳ್ವಹೆಗಡೆ ಅನ್ನಾಹಾರ ಮುಟ್ಟುತ್ತಿರಲಿಲ್ಲ…!!
ಒಂದು ದಿನ ಯಾವುದೋ ಕಾರಣದಿಂದಾಗಿ ಅಡಕತ್ತಾಯರು ಪೂಜೆ ಮುಗಿಸಿ ಪ್ರಸಾದ ಕೊಂಡು ಹೋಗುವಾಗ ವೇಳೆ ಮೀರಿ ಹೋಯಿತು. ಆಳ್ವ ಹೆಗಡೆ ಕೋಪದಿಂದ ಕ್ಷುದ್ರನಾಗಿ ಅಡಕತ್ತಾಯರನ್ನು ತೀವ್ರವಾಗಿ ಅಪಮಾನಿಸಿದ. ಇದರಿಂದ ಮನನೊಂದ ಅಡಕತ್ತಾಯರು ಈ ಬ್ರಹ್ಮರಿಗಿಂತಲೂ ಶಕ್ತಿಶಾಲಿಯಾದ ದೇವರನ್ನು ತಂದು ಇಲ್ಲೇ ಸಮೀಪದಲ್ಲಿ ನಾನು ಸ್ಥಾಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿ ಘಟ್ಟ ಹತ್ತಿ ಬಾಳೆ ಹೊನ್ನೂರು ಸಮೀಪದ ಖಾಂಡ್ಯಕ್ಕೆ ತೆರಳುತ್ತಾರೆ. ಅಲ್ಲಿ ಘೊರ ತಪಸ್ಸಾಚರಿಸಿ ಅಲ್ಲಿನ ವೀರಭದ್ರನನ್ನು ಮೆಚ್ಚಿಸುತ್ತಾರೆ. ನನ್ನ ಜೊತೆಯಾಗಿ ನನ್ನ ಊರಿಗೆ ಬಂದು ನೆಲೆಯಾಗಬೇಕು ಎಂದು ಪ್ರಾರ್ಥಿಸುತ್ತಾರೆ. ಇದಕ್ಕೆ ಒಪ್ಪಿದ ವೀರಭದ್ರ ತನ್ನ ಸಹಸ್ರಾರು ರುದ್ರಗಣಗಳ ಜೊತೆ ಅಡಕತ್ತಾಯರ ಬೆನ್ನುಹಿಡಿದು ಘಟ್ಟದಿಂದ ಇಳಿದು ಬಂದ. ಆಗುಂಬೆ ಬಳಿ ಬರುತ್ತಿದ್ದಂತೆ ಅಲ್ಲಿ ಸುಂಕದ ಕಟ್ಟೆಯಲ್ಲಿ ಮಾಲಿ ಸುಮಾಲಿ ಎಂಬ ಇಬ್ಬರು ಕಾವಲಿನವರಿರುತ್ತಾರೆ. ಅವರಿಗೆ ಘಟ್ಟದ ಇಳಿಜಾರಿನ ಮೇಲಿನ ಸುತ್ತಿನಲ್ಲಿ ನೋಡಿದಾಗ ಸಾವಿರಾರು ದೊಂದಿಗಳು ಕಂಡವಂತೆ. ಆದರೆ ಸುಂಕದ ಕಟ್ಟೆಯಿಂದ ಒಬ್ಬ ಬ್ರಾಹ್ಮಣ ಮಾತ್ರ ಹಾದು ಹೋದ. ಸುಂಕದ ಕಟ್ಟೆ ಹಾದು ಎದುರು ನೋಡಿದರೆ ಬ್ರಾಹ್ಮಣನ ಹಿಂದೆ ಮತ್ತೆ ಸಾವಿರ ದೊಂದಿಗಳು ಜಗ್ಗನೆ ಉರಿದು ಸಾಗತೊಡಗಿತು. ಇದೆಂತಾ ವೈಚಿತ್ರ್ಯ ಎಂದು ಅವರಿಗೆ ಅಚ್ಚರಿಯಾಯಿತು. ಕುತೂಹಲಕ್ಕೆ ಬಿದ್ದ ಆ ಇಬ್ಬರು ಕಾವಲುಗಾರರು ದೊಂದಿಗಳನ್ನು ಹಿಂಬಾಲಿಸುತ್ತಾ ಬಂದರಂತೆ. ಹಿರಿಯಡಕಕ್ಕೆ ಬಂದ ಅಡಕತ್ತಾಯರು ಆಳ್ವ ಹೆಗಡೆ ಮತ್ತು ಅಂಜಾರು ಬೀಡು ಕುರ್ಲಹೆಗಡೆಯವರ ಸಹಕಾರದೊಂದಿಗೆ ವೀರಭದ್ರನಿಗೆ ಭವ್ಯವಾದ ಗುಡಿ ಮತ್ತು ಅವನ ಗಣಗಳಿಗೆ ಗಣಗಳ ಶಾಲೆಯನ್ನು ಸ್ಥಾಪಿಸಿದರಂತೆ. ಬ್ರಹ್ಮರು ಮತ್ತು ವೀರಭದ್ರನ ಸೇವೆ ಮಾಡುತ್ತಾ ಕಾಲ ಕಳೆದ ಅಡಕತ್ತಾಯರು ಬ್ರಹ್ಮೈಕ್ಯರಾಗಿ ದೈವೀಶಕ್ತಿಯಾದರು. ಅವರ ಸಾನಿಧ್ಯ ಇಂದಿಗೂ ಹಿರಿಯಡಕದಲ್ಲಿದೆ. ವೀರಭದ್ರನಿಗೆ ಮೂರು ಪೂಜೆಗಳಾದರೆ ಅಡಕತ್ತಾಯರಿಗೆ ಎರಡು ಪೂಜೆ ನಿತ್ಯವೂ ಸಲ್ಲಿಕೆಯಾಗುತ್ತದೆ. ರುದ್ರಗಣಗಳನ್ನು ಹಿಂಬಾಲಿಸುತ್ತಾ ಬಂದ ಆ ಕಾವಲುಗಾರರಾದ ಮಾಲಿ- ಸುಮಾಲಿಯವರೂ ದೇವಸ್ಥಾನದ ರಾಜಗೋಪುರದಲ್ಲಿ ಆರಾಧಿಸಲ್ಪಡುತ್ತಿದ್ದಾರೆ…!
ಈ ಕ್ಷೇತ್ರದ ಇತಿಹಾಸವನ್ನು ನೋಡುದಾದರೆ ಸ್ಥಳೀಯ ಎರಡು ಮನೆತನಗಳು ಇಲ್ಲಿನ ದೇವರ ಕಾರ್ಯ ಇಂದಿನವರೆಗೆ ನಿರ್ವಿಘ್ನವಾಗಿ ನಡೆದುಕೊಂಡು ಬರುವಂತೆ ನೋಡಿ ಕೊಂಡಿವೆ. ಆಳ್ವ ಹೆಗಡೆ ಮತ್ತು ಕುರ್ಲ ಹೆಗಡೆ ಮನೆತನದವರ ಅನುವಂಶಿಕ ಆಡಳಿತದಲ್ಲಿ ಈ ಕ್ಷೇತ್ರ ಹಂತ ಹಂತವಾಗಿ ಬೆಳೆದುಬಂದಿದೆ. ಈ ಕ್ಷೇತ್ರದ ಶಕ್ತಿಗಳ ಕಾರಣೀಕ ಎಷ್ಟಿತ್ತು ಎಂದರೆ ಹಿಂದಿನಕಾಲದಲ್ಲಿ ಧರ್ಮಸ್ಥಳಕ್ಕೆ ಸಲ್ಲಿಕೆಯಾಗುವ ಕಾಣಿಕೆಯನ್ನು ಹಿರಿಯಡ್ಕದಲ್ಲಿ ಸ್ವೀಕರಿಸುತ್ತಿದ್ದರು. ಧರ್ಮಸ್ಥಳದ ಆಣೆ ಪ್ರಮಾಣಗಳನ್ನು ವೀರಭದ್ರನ ನಡೆಯಲ್ಲಿ ತೀರ್ಮಾನ ಮಾಡಿ ಪರಿಹಾರ ಪಡೆಯಲಾಗುತ್ತಿತ್ತು. ಆದರೆ ಹಿರಿಯಡ್ಕದ ನ್ಯಾಯವನ್ನು ಧರ್ಮಸ್ಥಳದಲ್ಲಿ ತೀರ್ಮಾನ ಮಾಡಲು ಸಾಧ್ಯವಿರಲಿಲ್ಲ. ಈ ರೀತಿ ಒಂದು ಕಾಲದಲ್ಲಿ ಧರ್ಮಸ್ಥಳದಷ್ಟೇ ಪ್ರಭಾವಶಾಲಿಯಾಗಿದ್ದ ದೇವಾಲಯವಿದು…!!
Reference
ಇದರಲ್ಲಿ ಕೆಲವು ಮಾಹಿತಿಗಳನ್ನು ಶ್ರೀ ಕ್ಷೇತ್ರದ ಅಧಿಕೃತ ಅಂತರ್ಜಾಲದಿಂದ ಹಾಗೂ ಗ್ರಾಮಸ್ಥರಿಂದ ಪಡೆದ ಮಾಹಿತಿ…!