
ಕೊಲ್ಕತ್ತಾ : ಸಿಗ್ನಲ್ ವ್ಯತ್ಯಾಸದಿಂದ ಗೂಡ್ಸ್ ರೈಲೊಂದು ಎಕ್ಸ್ಪ್ರೆಸ್ ರೈಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ನಡೆದಿದೆ. ಕಾಂಚನ್ಜುಂಗಾ ಎಕ್ಸ್ಪ್ರೆಸ್ ಅಸ್ಸಾಂನ ಸಿಲ್ಚಾರ್ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಕಾಂಚನ್ಜುಂಗಾ ಎಕ್ಸ್ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಡಿಎಂ, ಎಸ್ಪಿ, ವೈದ್ಯರು, ಅಂಬುಲೆನ್ಸ್ ಮತ್ತು ವಿಪತ್ತು ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ಪಾರುಗಾಣಿಕಾ, ಚೇತರಿಕೆ, ವೈದ್ಯಕೀಯ ನೆರವಿಗಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಹಿಂಬದಿಯ ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ಕತಿಹಾರ್ ವಿಭಾಗದ ವಿಭಾಗೀಯ ರೈಲ್ವೆ ಮ್ಯಾನೇಜರ್ ಹೇಳಿದ್ದಾರೆ.
13174 ಸಂಖ್ಯೆ ಕಾಂಚನ್ಜುಂಗಾ ಎಕ್ಸ್ಪ್ರೆಸ್ ರೈಲು ಅಗರ್ತಲಾದಿಂದ ಸಿಯಾಲ್ಡಹ್ಗೆ ತೆರಳುತ್ತಿತ್ತು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೊರೆತ ಮಾಹಿತಿಯ ಪ್ರಕಾರ, ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿದ ಪರಿಣಾಮ ಕಾಂಚನ್ಜುಂಗಾ ಎಕ್ಸ್ಪ್ರೆಸ್ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಮತ್ತು ಅಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ ಎಂದು ವರದಿಗಳು ತಿಳಿಸಿವೆ.
ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ಪರಿಹಾರ ಪ್ರಧಾನಿ ಮೋದಿ
ಕಾಂಚನಜುಂಗಾ ಎಕ್ಸ್ಪ್ರೆಸ್ ರೈಲು ಅಪಘಾತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆತಲಾ 2 ಲಕ್ಷ ಪರಿಹಾರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಘೋಷಣೆ ಮಾಡಿದ್ದಾರೆ.
ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಚನಜುಂಗಾ ಎಕ್ಸ್ಪ್ರೆಸ್ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ.