
ಉತ್ತರ ಪ್ರದೇಶ : ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಡಿಕ್ಕಿ ಉಂಟಾದ ಪರಿಣಾಮ 18 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಲಕ್ನೋ-ಆಗ್ರಾ ಎಕ್ಸ್ಪ್ರೆಸ್ವೇಯಲ್ಲಿ ಬಿಹಾರದ ಶಿವಗಢದಿಂದ ದೆಹಲಿಗೆ ಹೋಗುತ್ತಿದ್ದ ಸ್ಲೀಪರ್ ಬಸ್ ಬೆಹ್ತಾ ಮುಜಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಏರ್ಸ್ಟ್ರಿಪ್ನಲ್ಲಿ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತಲುಪಿ ಗಾಯಗೊಂಡ ಎಲ್ಲರನ್ನು ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತಪಟ್ಟವರ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಬಸ್ ಬಿಹಾರದ ಸೀತಾಮರ್ಹಿಯಿಂದ ದೆಹಲಿ ಕಡೆಗೆ ಸಾಗುತ್ತಿತ್ತು. ವೇಗವಾಗಿ ಸಾಗುತ್ತಿದ್ದ ಬಸ್ ಹಾಲಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದ ಕಾರಣ ಬಸ್ ನಜ್ಜುಗುಜ್ಜಾಗಿದೆ. ಪ್ರಯಾಣಿಕರ ದೇಹಗಳು ಆಘಾತಕ್ಕೆ ಚಿಂದಿಯಾಗಿವೆ.
ಪೊಲೀಸರು ಮತ್ತು ಇತರ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಹೊರತೆಗೆಯಲು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಸಾಗಿಸಲು ಪ್ರಯತ್ನಿಸುತ್ತಿದ್ದಾರೆ. ಘಟನಾ ಸ್ಥಳದ ದೃಶ್ಯಗಳು ಭೀಕವಾಗಿವೆ. ನೆಲದ ಮೇಲೆ ಹರಡಿರುವ ದೇಹಗಳು, ತುಂಡಾದ ಲೋಹದ ಚೂರುಗಳು, ಚೂರುಚೂರಾದ ಗಾಜು ರಸ್ತೆಯುದ್ದಕ್ಕೂ ಹರಡಿವೆ.
ಸಾರಿಗೆ ಸಚಿವ ದಯಾಶಂಕರ್ ಸಿಂಗ್ ಅವರು ಅಪಘಾತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಸೂಚನೆ ನೀಡಿದ್ದಾರೆ.
ಉನ್ನಾನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ ಮಾತನಾಡಿ, “ಬುಧಾರ ಬೆಳಿಗ್ಗೆ 05.15 ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಖಾಸಗಿ ಬಸ್ ಹಾಲಿನ ಟ್ಯಾಂಕರ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 20 ಅಧಿಕ ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ಬಸ್ ಅತಿಯಾದ ವೇಗದಲ್ಲಿತ್ತು ಎಂದು ಕಾಣುತ್ತದೆ . ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿ, ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.