
ಲಕ್ನೋ: ದೇಶಾದ್ಯಂತ ಮಳೆ ಆರ್ಭಟ ಜೋರಾಗಿದ್ದು ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಸಂಪೂರ್ಣ ಜನಜೀವನ ಅಷ್ಟವಸ್ಥೆಗೊಂಡಿದೆ
ಮಳೆ ಹಾಗೂ ಗುಡುಗು ಸಹಿತ ಭಾರಿ ಗಾಳಿ ಜನರನ್ನು ಆತಂಕಕಿಡು ಮಾಡಿದೆ ಸಿಡಿಲು ಬಡಿದು ಉತ್ತರ ಪ್ರದೇಶದಾದ್ಯಂತ ಬುಧವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ 38 ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಅದರಂತೆ ಪ್ರತಾಪ್ಗಢದಲ್ಲಿ ಅತೀ ಹೆಚ್ಚು 11 ಮಂದಿ ಮೃತಪಟ್ಟರೆ, ಸುಲ್ತಾನ್ಪುರದಲ್ಲಿ ಏಳು, ಚಂದೌಲಿಯಲ್ಲಿ ಆರು, ಮೈನ್ಪುರಿಯಲ್ಲಿ ಐದು ಮತ್ತು ಪ್ರಯಾಗ್ರಾಜ್ನಲ್ಲಿ ನಾಲ್ಕು, ಔರೈಯಾ, ಡಿಯೋರಿಯಾ, ಹತ್ರಾಸ್, ವಾರಣಾಸಿ ಮತ್ತು ಸಿದ್ಧಾರ್ಥನಗರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ, ಅಲ್ಲದೆ ಹತ್ತಕ್ಕೂ ಹೆಚ್ಚು ಮಂದಿ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೂರ್ವ ಉತ್ತರ ಪ್ರದೇಶದ ಚಂದೌಲಿಯಲ್ಲಿ ಸಿಡಿಲು ಬಡಿದು ಹಲವು ಮಂದಿ ಗಾಯಗೊಂಡಿದ್ದು ಪ್ರಸ್ತುತ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಮೃತರಲ್ಲಿ ಹೆಚ್ಚಿನವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು, ಮರದ ಕೆಳಗೆ ಆಶ್ರಯ ಪಡೆಯುತ್ತಿದ್ದವರು, ಸೇರಿದಂತೆ ಮೀನುಗಾರಿಕೆ ನಡೆಸುತ್ತಿದ್ದವರು ಸೇರಿದ್ದಾರೆ ಎನ್ನಲಾಗಿದೆ. ಮುಂದಿನ ಐದು ದಿನಗಳಲ್ಲಿ ಉತ್ತರ ಪ್ರದೇಶ ಮತ್ತು ಅದರ ಪಕ್ಕದ ರಾಜ್ಯಗಳಲ್ಲಿ ಇನ್ನಷ್ಟು ವ್ಯಾಪಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಉತ್ತರ ಪ್ರದೇಶದಲ್ಲಿ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಮಳೆಯಾಗಲಿದೆ. ಈಗಾಗಲೇ ರಾಜ್ಯದ 12 ಜಿಲ್ಲೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಜನತೆಗೆ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಆತಂಕ ಮನೆ ಮಾಡಿದೆ.
ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದರು ಮತ್ತು ವಿವಿಧ ಪ್ರಕೃತಿ ವಿಕೋಪಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವ ಭರವಸೆ ನೀಡಿದರು. ಈ ಮಾನ್ಸೂನ್ ಋತುವಿನಲ್ಲಿ ಉತ್ತರ ಪ್ರದೇಶವು ಈಗಾಗಲೇ 11 ಪ್ರತಿಶತ ಅಧಿಕ ಮಳೆಯನ್ನು ಪಡೆದಿದೆ. ಇದು ನದಿ ನೀರಿನ ಮಟ್ಟದಲ್ಲಿ ಏರಿಕೆಗೆ ಕಾರಣವಾಗಿದೆ. ಮತ್ತು ತಗ್ಗು ಪ್ರದೇಶಗಳನ್ನು ಜಲಾವೃತಗೊಳಿಸಿದೆ. ಭಾರತೀಯ ಮಾಪನಶಾಸ್ತ್ರ ಇಲಾಖೆ (ಐಎಂಡಿ) ಅಂಕಿಅಂಶಗಳ ಪ್ರಕಾರ ರಾಜ್ಯದ 75 ಜಿಲ್ಲೆಗಳ ಪೈಕಿ ಸುಮಾರು 68 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಗಂಗಾ, ರಾಮಗಂಗಾ, ಯಮುನಾ, ರಾಪ್ತಿ ಸೇರಿದಂತೆ ರಾಜ್ಯದಾದ್ಯಂತ ಹರಿಯುವ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಪೂರ್ವ ಉತ್ತರ ಪ್ರದೇಶ, ದೆಹಲಿ ಎನ್ಸಿಆರ್ ಮತ್ತು ಇತರ ಪ್ರದೇಶಗಳು ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದೆ ಜುಲೈ 11 ರಂದು ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ನೀಡಿದೆ.