
ಕಾರವಾರ: ಪತ್ರಕರ್ತರು ಸಾಗುತ್ತಿದ್ದ ಕಾರಿನ ಕೆಳಗೆ ನಾಡ ಬಾಂಬ್ ಸ್ಫೋಟವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗುಂದ ಗ್ರಾಮದ ಬಳಿ ಮಂಗಳವಾರ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಪತ್ರಕರ್ತರಾದ ಸಂದೇಶ ದೇಸಾಯಿ ಹಾಗೂ ಹರೀಶ್ ಭಟ್ಟ , ಟಿ. ಕೆ.ದೇಸಾಯಿ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನ ಟೈಯರ್ ಕೆಳಗೆ ಈ ನಾಡಬಾಂಬ್ ಸಿಕ್ಕಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಪತ್ರಕರ್ತರು ಅಪಾಯದಿಂದ ಪಾರಾಗಿದ್ದಾರೆ.

‘ಈ ನಾಡಬಾಂಬ್ ಮುಖ್ಯವಾಗಿ ಹಂದಿ ಸಾಯಿಸಲು ಬಳಸುತ್ತಾರೆ’ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಬಹಳಷ್ಟು ನಾಡಬಾಂಬ್ ತೆಗೆದುಕೊಂಡು ಹೋಗುವಾಗ ಬಿದ್ದಿದೆಯೇ ಅಥವಾ ಉದ್ದೇಶ ಪೂರ್ವಕವಾಗಿ ಇಡಲಾಗಿದೆಯೇ ಎಂಬುದು ತನಿಖೆಯ ಹಂತದಲ್ಲಿದೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
ತಾಲ್ಲೂಕಿನಲ್ಲಿ ನಾಡಬಾಂಬ್ ಬಳಕೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಹೆಚ್ಚಿನ ಕ್ರಮ ವಹಿಸಬೇಕಿದೆ ಎನ್ನುವ ಆಗ್ರಹ ಕೇಳಿಬಂದಿದೆ.