
ಕಳೆದ ನಾಲ್ಕು ಐದು ದಿನಗಳಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು ಅನೇಕ ಕಡೆಗಳಲ್ಲಿ ಜನಜೀವನವು ಅಸ್ತವ್ಯಸ್ತಗೊಂಡಿದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಇದುವರೆಗೆ 7 ಮಂದಿ ಮೃತಪಟ್ಟಿದ್ದಾರೆ, ಮೊನ್ನೆ ಉಳ್ಳಾಲ ತಾಲೂಕಿನ ಕುತ್ತಾರುವಿನ ಮದನಿನಗರದಲ್ಲಿ ಮನೆ ಕುಸಿದು ನಾಲ್ವರು ಮೃತಪಟ್ಟಿದ್ದರೆ, ಮಂಗಳೂರು ನಗರದ ರೋಸಾರಿಯೊ ಶಾಲೆ ಹಿಂಭಾಗದಲ್ಲಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ್ದಾರೆ. ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ 20 ವರ್ಷದ ಯುವತಿ ಪ್ರತೀಕ್ಷಾ ಶೆಟ್ಟಿ ಅಸುನೀಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಜಿಲ್ಲೆಯ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ನೀಡಿದೆ.
ದಕ್ಷಿಣ ಕನ್ನಡ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಕಾರಣಕ್ಕೆ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಹಿನ್ನೆಲೆ ಮೀನುಗಾರರು ಕೂಡ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡುವುದಕ್ಕೆ ನಿಷೇಧ ಹಾಕಲಾಗಿದೆ. ಕಡಲ ಕೊರೆತ,ಭೂ ಕುಸಿತ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ, ಅಪಾಯದಿಂದ ದೂರ ಉಳಿಯಲು ಮೀನುಗಾರರು ಸಮುದ್ರಕ್ಕಿಯ ಬಾರದು ಎಂದು ಸೂಚನೆ ನೀಡಲಾಗಿದೆ.
ಕೊಡಗು ಹಾಗೂ ಕೇರಳದ ವಯನಾಡು ಪ್ರದೇಶದಲ್ಲಿ ಮುಂಗಾರು ಮಳೆ ಜೋರಾಗಿದೆ. ಇದರಿಂದಾಗಿ ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದೆ. ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನ ಕಾವೇರಿ ಉಗಮ ಸ್ಥಾನ ಭಾಗಮಂಡಲದ ತ್ರೀವೇಣಿ ಸಂಗಮ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗ್ರತ ಕ್ರಮವಾಗಿ ಕೊಡಗಿನ ಮೂರು ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಇನ್ನು ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ , ಗಟ್ಟದ ಪ್ರದೇಶದಲ್ಲಿ ಅಧಿಕ ಮಳೆಯಾದ ಕಾರಣ ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿಯು ಉಕ್ಕಿ ಹರಿಯುತ್ತಿದೆ ಪ್ರವಾಸಿಗರಿಗೆ ಹಾಗೂ ಯಾತ್ರಿಕರಿಗೆ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಕೇರಳ ಕಾಸರಗೋಡು ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಬುಧವಾರದಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಪರಿಣಾಮ ಮಧೂರು ದೇವಸ್ಥಾನ ಬಳಿಯ ಮಧುವಾಹಿನಿ ನದಿ ತುಂಬಿ ಹರಿಯುತ್ತಿದ್ದು, ದೇವಸ್ಥಾನದ ಒಳಗೂ ನೀರು ನುಗ್ಗಿದೆ.
ದೇವಸ್ಥಾನದ ಪ್ರಾಂಗಣದಲ್ಲಿ ನಾಲೈದು ಅಡಿ ನೀರು ಏರಿ ಸಂಪೂರ್ಣ ಕೆರೆಯಂತೆ ಭಾಸವಾಗುತ್ತಿದೆ. ದೇವಸ್ಥಾನ ಸುತ್ತಲೂ ಸಂಪೂರ್ಣ ಜಲಾವೃತವಾಗಿದ್ದು ದ್ವೀಪದಂತೆ ಗೋಚರಿಸುತ್ತಿದೆ. ಪುರೋಹಿತರುಗಳು ನೀರಿನಲ್ಲಿಯೇ ನಿಂತು ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೆ ದೇವಸ್ಥಾನದ ಅಡುಗೆಕೋಣೆಯಲ್ಲಿರುವ ಪಾತ್ರೆಗಳು ನೀರಿನಲ್ಲಿ ಚೆಲ್ಲಾಪಿಲ್ಲಿಯಾಗಿವೆ.
ಜಿಲ್ಲೆವಾರು ಗರಿಷ್ಠ ಮಳೆ ವರದಿ
- ಉಡುಪಿ: 196 ಮಿಲಿ ಮೀಟರ್
- ದಕ್ಷಿಣ ಕನ್ನಡ: 167.5 ಮಿಲಿ ಮೀಟರ್
- ಉತ್ತರ ಕನ್ನಡ: 153.5 ಮಿಲಿ ಮೀಟರ್
- ಕೊಡಗು: 119 ಮಿ.ಮೀಟರ್
- ಹಾಸನ: 100 ಮಿ.ಮೀಟರ್
- ಶಿವಮೊಗ್ಗ: 84.5 ಮಿ.ಮೀಟರ್
- ಚಿಕ್ಕಮಗಳೂರು: 77 ಮಿ.ಮೀಟರ್
ಇನ್ನು ಮುಂದಿನ 2 ದಿನಗಳ ಕಾಲ ಅಂದರೆ ಜೂನ್ 30ರ ವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಅದರಲ್ಲೂ ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು, ಕೊಡಗು ಭಾಗಗಳಲ್ಲಿ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ನಿರೀಕ್ಷೆಯಿದ್ದು, ಇನ್ನುಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚಯನ್ನೂ ನೀಡಿದೆ.