
ಬೆಂಗಳೂರು, : ಖ್ಯಾತ ಹಿರಿಯ ಯಕ್ಷಗಾನ ಕಲಾವಿದ, ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮೇಳದಲ್ಲಿ ಸುಮಾರು 50 ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿದ ಕುಂಬ್ಳೆ ಶ್ರೀಧರ ರಾವ್ (76) ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆಯವರಾದ ಶ್ರೀಧರ ರಾವ್ ಉಪ್ಪಿನಂಗಡಿಯ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆಯಲ್ಲಿ ವಾಸವಿದ್ದರು. ಎದೆನೋವಿನಿಂದ ಬಳಲುತ್ತಿದ್ದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಶ್ರೀಧರ ರಾವ್ ಅವರು ತಮ್ಮ ಸ್ತ್ರೀವೇಶದಿಂದಲೇ ಯಕ್ಷಗಾನ ಪ್ರೇಕ್ಷಕರ ಮನ ಗೆದ್ದಿದ್ದರು , ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದರಾದ ಶೇಣಿ ಗೋಪಾಲಕೃಷ್ಣ ಭಟ್ಟರ ರಾವಣ, ವಾಲಿ ಪಾತ್ರಗಳಿಗೆ ಮಂಡೋದರಿಯಾಗಿ, ತಾರೆಯಾಗಿ ಸಾಥ್ ನೀಡಿದ್ದರು. ಇರಾ ಸೋಮನಾಥೇಶ್ವರ ಮೇಳದ ಮೂಲಕ ಯಕ್ಷಗಾನ ವೃತ್ತಿಜೀವನ ಆರಂಭಿಸಿ ವೃತ್ತಿಜೀವನದ ಆರಂಭದಲ್ಲಿ ಸ್ತ್ರೀ ವೇಷಗಳಿಂದಲೇ ಪ್ರಸಿದ್ಧರಾದರು. ಶ್ರೀಧರ ರಾವ್ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮುದೇವಿ, ನಳ ದಮಯಂತಿಯ ದಮಯಂತಿ, ಭೀಷ್ಮ ವಿಜಯದ ಅಂಬೆ ಇತ್ಯಾದಿ ಪಾತ್ರಗಳಲ್ಲಿ ಜನಮನ ಗೆದ್ದಿದ್ದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಸಂದರ್ಭದಲ್ಲಿ ಸನ್ಮಾನ, ಎಡನೀರು ಮಠದ ಸನ್ಮಾನ ಅವರಿಗೆ ದೊರೆತಿವೆ.