
ನಿತ್ಯ ಧ್ವನಿ ಸಂಪಾದಕೀಯ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಲೇ ಇದೆ…!
ಕುಡಿಯಲು, ದೈನಂದಿನ ಉಪಯೋಗಕ್ಕೆ, ಜಾನುವಾರುಗಳಿಗೆ, ಕ್ರಷಿ ಹಾಗೂ ತೋಟಗಾರಿಕಾ ಚಟುವಟಿಕೆಗಳಿಗೆ ನೀರಿಲ್ಲದ ಪರಿಸ್ಥಿತಿ ರಾಜ್ಯದ ಕೆಲವೆಡೆ ಉದ್ಭವವಾಗಿದೆ…!!
ಕೆಲವೆಡೆ ಒಂದೆರಡು ಮಳೆ ಬಂದು ಹೋಗಿದೆ ಆದರೂ ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ…!
ಕಳೆದ ಬಾರಿ ಮುಂಗಾರು ಮಳೆ ಸಹ ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ, ಅಲ್ಪ ಸ್ವಲ್ಪ ಬಂದ ಮಳೆಯೂ ಸಹ ಭೂಮಿ ಒಳಗಡೆ ಇಂಗಲಿಲ್ಲ, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಗೆ ಕಡಿಮೆ ಆಗಿದೆಯೇ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ…!!
ಮಿತಿಮೀರುತ್ತಿರುವ ಅರಣ್ಯ ಪ್ರದೇಶದ ನಾಶ ಜಾಗತಿಕ ತಾಪಮಾನದಲ್ಲಿ ಹೆಚ್ಚಳವಾಗಲು ಪ್ರಮುಖ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೂ ಪ್ರಜ್ಞಾವಂತ ನಾಗರಿಕರಾದ ನಾವುಗಳು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಏಕೆ ಕೆಲಸ ಮಾಡುತ್ತಿಲ್ಲ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು…!
ಇರುವುದೊಂದು ಭೂಮಿ, ಪ್ರಕೃತಿಯೊಂದಿಗೆ ಸಾಮರಸ್ಯವಿರಲಿ
ವಿಶ್ವದಲ್ಲಿ ಕೋಟ್ಯಾಂತರ ನಕ್ಷತ್ರ ಪುಂಜಗಳಿವೆ, ನಮ್ಮ ನಕ್ಷತ್ರ ಪುಂಜದಲ್ಲಿ ಹಲವಾರು ಗ್ರಹಗಳಿವೆ…!
ಆದರೆ ಅವುಗಳಲ್ಲಿ ಭೂಮಿ ಮಾತ್ರ ವಾಸಿಸಲು ಯೋಗ್ಯವಾದ ಗ್ರಹವಾಗಿದೆ…!!
ಜಾಗತಿಕ ತಾಪಮಾನ, ಮಾಲಿನ್ಯ, ಸಂಪನ್ಮೂಲಗಳ ಅತಿಯಾದ ಬಳಕೆಯಿಂದಾಗಿ ಭೂಮಿ ಇಂದು ವಿನಾಶದೆಡೆಗೆ ಸಾಗುತ್ತಿದೆ. ಇದಕ್ಕೆಲ್ಲ ಮಾನವನ ದುರಾಸೆಯೇ ಕಾರಣ. ಆಧುನಿಕತೆ ಬೆಳೆದಂತೆಲ್ಲ ಭೂಮಿ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ…!
ಆದ್ದರಿಂದ ಪರಿಸರ ಸಂರಕ್ಷಣೆ ಮಾಡಿ ಎಂದು ಕರೆ ನೀಡಬೇಕಾದ ಪರಿಸ್ಥಿತಿಗೆ ಬಂದು ನಾವು ಬಂದು ನಿಂತಿದ್ದೇವೆ…!!
ಜಾಗತಿಕ ತಾಪಮಾನದಲ್ಲಿ ಏರಿಕೆ
ಅರಣ್ಯನಾಶದಿಂದಾಗಿ ಇಂದು ಮಳೆಯ ಕೊರತೆ ಮತ್ತು ಜಾಗತಿಕ ತಾಪಮಾನ ಏರುತ್ತಲೇ ಇದೆ. ಅಧಿಕ ತಾಪಮಾನದಿಂದಾಗಿ ಭೂಮಿಯ ಮೇಲಿನ ಹಿಮ ರಾಶಿಯು ಕರಗಿ ಪ್ರವಾಹವಾಗುವುದರ ಜೊತೆಗೆ ಸಮುದ್ರದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಕರಾವಳಿ ತೀರ ಪ್ರದೇಶಗಳಿಗೆ ಅಪಾಯವನ್ನು ತಂದೊಡ್ಡಿದೆ. ಇಂದು ಭೂಮಿಯ ಮೇಲಾಗುತ್ತಿರುವ ಶೋಷಣೆಗಳನ್ನು ತಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತೀವರ್ಷ ಸುಮಾರು 90 ಬಿಲಿಯನ್ ಟನ್ಗಳಷ್ಟು ಸಂಪನ್ಮೂಲಗಳನ್ನು ಭೂಮಿಯಿಂದ ಹೊರತೆಗೆಯಲಾಗುತ್ತಿದೆ ಹಾಗೂ ಸುಮಾರು ಶೇ 70 ರಷ್ಟು ಸಂಪನ್ಮೂಲಗಳನ್ನು ಅತಿಯಾಗಿ ಬಳಸಲಾಗುತ್ತಿದೆ…!
ಅರಣ್ಯನಾಶದ ಪರಿಣಾಮಗಳು

1)ಹವಾಮಾನ ಅಸಮತೋಲನ ಮತ್ತು ಹವಾಮಾನ ಬದಲಾವಣೆ
2) ಜಾಗತಿಕ ತಾಪಮಾನ ಏರಿಕೆ
3)ಮಣ್ಣಿನ ಸವಕಳಿ
4)ಪ್ರವಾಹ
5)ವನ್ಯಜೀವಿ ಅಳಿವು ಮತ್ತು ಆವಾಸಸ್ಥಾನ ನಷ್ಟ
6)ಆಮ್ಲೀಯ ಸಾಗರಗಳು
ಜೀವನದ ಗುಣಮಟ್ಟದಲ್ಲಿ ಕುಸಿತ
ಯಾವ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆಯೋ, ಅದೇ ಪ್ರಮಾಣದಲ್ಲಿ ಗಿಡ – ಮರಗಳನ್ನು ನೆಟ್ಟು ಬೆಳೆಸುತ್ತಿಲ್ಲ. ಆದುದರಿಂದ ನಿಸರ್ಗದ ಈ ಅಮೂಲ್ಯವಾದ ಸಂಪತ್ತು ಅತಿವೇಗದಿಂದ ಕಡಿಮೆಯಾಗುತ್ತಿದ್ದು, ಜೈವಿಕ ಹಾಗೂ ವಾತಾವರಣ ಸಮತೋಲನ ಹಾಳು ಮಾಡುತ್ತಿದೆ. ಕಲ್ಲಿನ ಗಣಿಗಳ ಮೂಲಕ ಬೆಟ್ಟಗಳ ಸಾಲುಗಳೂ ಕಾಣದಂತಾಗಿ ಎಲ್ಲೆಡೆ ನಿರ್ಜನವಾಗುತ್ತಿವೆ ಹಾಗೂ ಹತ್ತಿರದ ಭಾಗದಲ್ಲಿ ಮಳೆಯೂ ಕಡಿಮೆಯಾಗುತ್ತಿದೆ…!
ಲೆಕ್ಕವಿಲ್ಲದಷ್ಟು ಅರಣ್ಯ ಭಾಗವನ್ನು ನಾಶ ಮಾಡಿರುವುದರಿಂದ ಪ್ರಾಣಿಗಳೂ ನಿರಾಶ್ರಿತರಾಗಿವೆ. ಆದುದರಿಂದ ಅವು ಮಾನವರ ನೆಲೆಯಲ್ಲಿ ಆಶ್ರಯ ಹುಡುಕುತ್ತಿವೆ. ಆದುದರಿಂದಲೇ ಕರ್ನಾಟಕದ ಅನೇಕ ಭಾಗಗಳಲ್ಲಿ ಮೇಲಿಂದಮೇಲೆ ಹುಲಿ-ಚಿರತೆ, ಆನೆಗಳು ಗ್ರಾಮ – ನಗರಗಳಲ್ಲಿ ಓಡಾಡಿ ಭಯ ಸೃಷ್ಟಿಸಿದ ಘಟನೆಗಳು ನಡೆಯುತ್ತಿವೆ…!!
ಅರಣ್ಯದ ಉಪಯುಕ್ತತೆ
1) ಮರಗಳು ಗಾಳಿಯಲ್ಲಿರುವ ಇಂಗಾಲ ಡೈಆಕ್ಸೈಡ್ ಹೀರಿ, ಸಕಲ ಜೀವಿಗಳಿಗೆ ಅತ್ಯಾವಶ್ಯಕ ಆಮ್ಲಜನಕವನ್ನು ಬಿಡುತ್ತವೆ…!
2) ಅನೇಕ ಗಿಡಮರಗಳು ಓಝೋನ (ಭೂಮಿಯ ಸುತ್ತಲಿರುವ ರಕ್ಷಾ ಕವಚ) ಪ್ರಮಾಣವನ್ನು ಬೆಳೆಸಲು ಸಹಾಯ ಮಾಡುತ್ತವೆ…!!
3) ದುರ್ಲಭ ಪ್ರಾಣಿ, ವನೌಷಧಿಗಳ ಜೋಪಾನವು ಅರಣ್ಯಗಳಿಂದಲೇ ಆಗುತ್ತದೆ…!
4) ದಟ್ಟವಾದ ಅರಣ್ಯಗಳ ಗಾಳಿಯ ತೇವಾಂಶದ ಅಧಿಕವಾಗಿರುವುದರಿಂದ ವಾತಾವರಣ ತಂಪಾಗಿರುತ್ತದೆ…!!
5) ಮಳೆಯ ತೀವ್ರತೆ ಅರಣ್ಯ ಭಾಗದಲ್ಲಿ ಹೆಚ್ಚು ಇರುವುದರಿಂದ, ಮರಗಳು ಇದ್ದಲ್ಲಿ ನೀರು ಹರಿದು ಹೋಗುವ ಪ್ರಮಾಣವು ಕಡಿಮೆಯಾಗುತ್ತದೆ ಹಾಗೂ ಭೂಗರ್ಭದ ನೀರಿನ ಶೇಖರಣೆಯಲ್ಲಿ ಹೆಚ್ಚಳವಾಗುತ್ತದೆ…!
ಮರದ ಕಾರ್ಯ
1) ಆಮ್ಲಜನಕ ಉತ್ಪಾದಿಸುವುದು
2) ವಾಯು ಮಾಲಿನ್ಯವನ್ನು ತಡೆಯುವುದು
3) ಭೂಮಿಯ ಫಲವತ್ತತೆ ಕಾಪಾಡುವುದು ಹಾಗೂ ಭೂಮಿಯ ಕಾವು ತಡೆಯುವುದು
4) ಭೂಗರ್ಭದ ನೀರಿನ ಮಟ್ಟವನ್ನು ಹೆಚ್ಚಿಸುವುದು ಹಾಗೂ ಗಾಳಿಯಲ್ಲಿ ತೇವಾಂಶವನ್ನು ಕಾಯ್ದಿರಿಸುವುದು
5) ಪಶು ಪಕ್ಷಿಗಳಿಗೆ ಆಶ್ರಯ ನೀಡುವುದು
6) ಪ್ರೋಟೀನಗಳನ್ನು ರೂಪಾಂತರಗೊಳಿಸುವುದು
ಸಂಪಾದಕರ ನಿಲುವು
ಅನುಮತಿ ಇಲ್ಲದೆ ಅರಣ್ಯವನ್ನು ನಾಶಮಾಡುವವರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು…!
ಅರಣ್ಯವನ್ನು ಉಳಿಸುವ ನಿಟ್ಟಿನಲ್ಲಿ ಈಗಿನ ಯುವಜನಾಂಗ ಕಾರ್ಯಪ್ರವೃತ್ತರಾಗಬೇಕು…!!
ವರ್ಷಕ್ಕೊಮ್ಮೆ ಪರಿಸರ ದಿನಾಚರಣೆ ಆಚರಿಸಿ ಗಿಡ ನೆಟ್ಟು ಫೋಟೋ ಕಿಕ್ಕಿಸಿ ಸ್ಟೇಟಸ್ ನಲ್ಲಿ ಇಡಲು ಮಾತ್ರ ಪರಿಸರ ದಿನಾಚರಣೆ ಸೀಮಿತವಾಗಬಾರದು, ವರ್ಷಪೂರ್ತಿ ಪರಿಸರ ದಿನವೇ ಆಗಬೇಕು…!
ಕಾಡು ಉಳಿದರೇ ನಾಡು ಉಳಿದೀತು, ಹಸಿರೇ ಉಸಿರು