
ಬೆಂಗಳೂರು, : ರಾಜ್ಯದ ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳು ಮಳೆಯಿಂದ ಈಗಾಗಲೇ ತತ್ತರಿಸಿ ಹೋಗಿದೆ ಗುಡ್ಡ ಕುಸಿತ ಗೋಡೆ ಕುಸಿತ ನೆರೆ ನೀರು ನುಗ್ಗಿ ಅಪಾರ ಪ್ರಮಾಣದ ಕೃಷಿ ಬೆಳೆ ಹಾನಿ ಇವೆಲ್ಲದರ ನೋವುಗಳ ಮಧ್ಯೆ ಬದುಕನ್ನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ ಇದರ ಮಧ್ಯೆ ಡೆಂಗ್ಯೂ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚುತ್ತಿದೆ ಇದರ ಆತಂಕವು ಈಗ ರಾಜ್ಯದ ಜನರನ್ನು ಕಾಡುತ್ತಿದೆ.
ಡೆಂಗ್ಯೂ ಆತಂಕದ ನಡುವೆ ಇದೀಗ ಕರ್ನಾಟಕಕ್ಕೆ ನಿಫಾ ಕಂಟಕ ಎದುರಾಗಿದೆ. ಪಕ್ಕದ ರಾಜ್ಯ ಕೇರಳದ ಮಲಪ್ಪುರಂನಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ದೃಢವಾಗಿದೆ. ಹಾಗಾಗಿ ಸದ್ಯ ರಾಜ್ಯದಲ್ಲಿ ಡೆಂಗ್ಯೂ ಜೊತೆ ನಿಫಾ ವೈರಸ್ ಆತಂಕ ಶುರುವಾಗಿದೆ.
ನಿಫಾ ಇರೋದನ್ನ ಕೇರಳದ ಆರೋಗ್ಯ ಸಚಿವರು ದೃಢಪಡಿಸಿದ್ದಾರೆ. ನಿಫಾ ಸೋಂಕಿತ ಬಾಲಕನನ್ನು ಕೊಯಿಕ್ಕೋಡ್ ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ಮನೆಯವರು ಮಾಸ್ಕ್ ಧರಿಸುವಂತೆ ನಿರ್ದೇಶನ ನೀಡಲಾಗಿದೆ.
ಬಾಲಕನ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಬಾಲಕನ ಸ್ಥಿತಿ ಗಂಭೀರವಾಗಿದೆ. ಆತನನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವೈರಸ್ ಹರಡುವಿಕೆಯ ಬಗ್ಗೆ ಜಾಗೃತಿ ಹೆಚ್ಚಿಸಲು ನಿಪಾ ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸವಜನಿಕ ಸುರಕ್ಷತೆಗಳನ್ನು ಹೆಚ್ಚಿಸುವುದು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುವುದು ಮತ್ತು ನಿಯಂತ್ರಣದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಮಲಪ್ಪುರಂನಲ್ಲಿರುವ ಸರ್ಕಾರಿ ತಂಗುದಾಣದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.
ಬಾಲಕನ ಸಂಪರ್ಕದಲ್ಲಿದ್ದವರ ಇದ್ದವರನ್ನು ಪರೀಕ್ಷೆಗೆ ಒಳಪಡಿಸುವುದು. ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲು ಕ್ರಮವಹಿಸಲಾಗಿದೆ. ಬಾಲಕನಿಗೆ ಸೋಂಕು ತಗುಲಿದ ಪ್ರದೇಶದ 3 ಕಿಮೀ ವ್ಯಾಪ್ತಿಯಲ್ಲಿ ನಿರ್ಬಂಧ ವಿಧಿಸಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ನಿಫಾ ವೈರಸ್ ಏನು ?
ಬಾವಲಿ ಮತ್ತು ಹಂದಿಗಳ ದೈಹಿಕ ದ್ರವದ ಮೂಲಕ ನಿಫಾ ವೈರಸ್ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೂ ವೈರಸ್ ಹರಡಿದ ಉದಾಹರಣೆ ಇದೆ. ನಿಫಾ ವೈರಸ್ ಸೋಂಕಿಗೆ ಸದ್ಯ ಯಾವುದೇ ಚಿಕಿತ್ಸೆ ಇಲ್ಲ. ಶೇ.70 ರಷ್ಟು ಪ್ರಾಣಹೋಗುವ ಸಾಧ್ಯತೆ ಇರುತ್ತದೆ.
ನಿಫಾ ವೈರಸ್ ತಗುಲಿದಾಗ ಜ್ವರ ಕಾಣಿಸಿಕೊಳ್ಳುತ್ತೆ. ಉಸಿರಾಟದ ತೊಂದರೆ, ತಲೆನೋವು, ವಾಂತಿ ಆಗುತ್ತದೆ. ಮೆದುಳಿನ ಉರಿಯೂತ, ದೇಹದಲ್ಲಿ ಸೆಳೆತ ಉಂಟಾಗಬಹುದು. ಸೋಂಕಿತ ವ್ಯಕ್ತಿ ಕೋಮಾ ಸ್ಥಿತಿಗೆ ಜಾರಿ ಮೃತಪಡಬಹುದು.
ನಿಫಾ ವೈರಸ್ ವಿಶ್ವದ ಯಾವ ಯಾವ ದೇಶದಲ್ಲಿ ಹರಡಿತ್ತು?
ನಿಫಾ ವೈರಸ್ ಮೊದಲು ಕಾಣಿಸಿಕೊಂಡಿದ್ದು, 1998ರಲ್ಲಿ.. ಮಲೇಷ್ಯಾ ಹಾಗೂ ಸಿಂಗಪುರ ದಲ್ಲಿ ಈ ಮಹಾಮಾರಿ ವೈರಸ್
ನೂರಾರು ಬಲಿ ಪಡೆದಿದೆ. 300ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದರು. ಒಟ್ಟು ಸೋಂಕಿತರ ಪೈಕಿ ಶೇ. 70 ರಿಂದ 86ರಷ್ಟು ಮಂದಿ ಸಾವನ್ನಪ್ಪಿದ್ದರು.
1998 ರಿಂದ 2015ರವರೆಗೆ ವಿಶ್ವಾದ್ಯಂತ ಒಟ್ಟು 600ಕ್ಕೂ ಹೆಚ್ಚು ನಿಫಾ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ತೆ ಹೇಳಿದೆ. 2001ರಲ್ಲಿ ಭಾರತ ಹಾಗೂ ಬಾಂಗ್ಲಾ ದೇಶಗಳಲ್ಲಿ ಒಟ್ಟು 91 ಮಂದಿ ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ 62 ಮಂದಿ ಸಾವನ್ನಪ್ಪಿದ್ದರು. 2018ರಲ್ಲಿ ಕೇರಳದಲ್ಲಿ 21 ಮಂದಿ ನಿಫಾ ಮಹಾಮಾರಿಗೆ ಬಲಿಯಾಗಿದ್ದರು. 2019 ಹಾಗೂ 2021ರಲ್ಲೂ ಕೇರಳದಲ್ಲಿ ಕಾಣಿಸಿಕೊಂಡಿದ್ದ ನಿಫಾ, ಇದೀಗ ಮತ್ತೆ ಕೇರಳದಲ್ಲಿ ತಲೆ ಎತ್ತಿದೆ.