
2014 ರಲ್ಲಿ ಆಂಧ್ರ ಪ್ರದೇಶದಿಂದ ವಿಭಜನೆಯಾಗಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾದ ಬಳಿಕ 2023 ರ ವರೆಗೆ 10 ವರ್ಷಗಳ ಏಕ ಚಕ್ರಾಧಿಪತಿ ರೀತಿಯಲ್ಲಿ ಆಡಳಿತ ನಡೆಸಿದ ಕೆ ಚಂದ್ರಶೇಖರ್ ರಾವ್ ಹಾಗೂ ಅವರ ಪಕ್ಷ ಬಿ ಆರ್ ಎಸ್ ಹೀನಾಯವಾಗಿ ಸೋಲಲು ಕಾರಣಗಳೇನು…!?
ತೆಲುಗು ಅಸ್ಮಿತೆ ಪಕ್ಷವನ್ನು ಬೆಂಬಲಿಸುತಿದ್ದ ತೆಲಂಗಾಣದ ಜನರು ದಿಢೀರನೆ ರಾಷ್ಟ್ರೀಯ ಪಕ್ಷಗಳ ಕಡೆಗೆ ಮುಖಮಾಡಲು ಕಾರಣಗಳೇನು…?
ಬಿ ಆರ್ ಎಸ್ ಎಡವಿದ್ದೆಲ್ಲಿ…? ಉಚಿತ ಭಾಗ್ಯಗಳನ್ನು ನೀಡಿದ್ದೇವೆ, ಜನ ಓಟು ಹಾಕುತ್ತಾರೆ ಅನ್ನುವ ಅತಿಯಾದ ಆತ್ಮವಿಶ್ವಾಸವೇ ಅಥವಾ ಕುಟುಂಬ ರಾಜಕಾರಣದ ಪರಿಣಾಮವೇ…?
ನಿತ್ಯ ಧ್ವನಿ ಸಂಪಾದಕೀಯ
2014 ರಲ್ಲಿ ಆಂಧ್ರ ಪ್ರದೇಶದಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಭಜನೆಯಾದ ಬಳಿಕ ಕೆ ಚಂದ್ರಶೇಖರ್ ರಾವ್ ನೇತೃತ್ವದ ಅಂದಿನ ಟಿ ಆರ್ ಎಸ್ ಬಹುಮತದೊಂದಿಗೆ ಸರ್ಕಾರ ರಚಿಸಿತು ಹಾಗೂ ಕೆ ಚಂದ್ರಶೇಖರ್ ರಾವ್ ತೆಲಂಗಾಣದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು…!
2018 ರಲ್ಲಿ ಅವಧಿಗೂ ಮುನ್ನ ಅಂದರೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಸಿದ್ಧರಾದ ಕೆ ಸಿ ಆರ್ ನೇತೃತ್ವದ ಟಿ ಆರ್ ಎಸ್ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ 88 ರಲ್ಲಿ ಗೆಲುವು ಸಾಧಿಸುವ ಮೂಲಕ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು, ಚಂದ್ರಶೇಖರ್ ರಾವ್ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು…!!
2019 ರಲ್ಲಿ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಎನ್ ಡಿ ಎ ಹಾಗೂ ಅಂದಿನ ಯುಪಿಎ ಮೈತ್ರಿಕೂಟಕ್ಕೆ ಸಮನಾಗಿ ತ್ರತೀಯ ರಂಗವನ್ನು ಕಟ್ಟಿ, ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಪ್ರಧಾನಿಯಾಗುವ ಆಸೆಯನ್ನು ಇಟ್ಟುಕೊಂಡು ದೇಶದಾದ್ಯಂತ ಸಂಚರಿಸಿ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾಗಿದ್ದ ಕೆ ಸಿ ಆರ್ ಅವರಿಗೆ 2019 ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಕಂಟಕ ಎದುರಾಯಿತು…!
2019 ರಲ್ಲಿ ತೆಲಂಗಾಣದ ಒಟ್ಟು 17 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೊಟ್ಟ ಮೊದಲ ಬಾರಿಗೆ 4 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಟಿ ಆರ್ ಎಸ್ ಮೊದಲ ಶಾಕ್ ನೀಡಿತು…!!
ಸ್ವತಃ ಸಿಎಂ ಕೆ ಸಿ ಆರ್ ಪುತ್ರಿ ಕೆ ಕವಿತಾ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎದುರು ಸೋಲನ್ನು ಅನುಭವಿಸುವ ಮೂಲಕ ತೀವ್ರ ಮುಖಭಂಗ ಎದುರಿಸುವಂತಾಯಿತು…!
ಆ ನಂತರ 2023 ರ ವಿಧಾನಸಭಾ ಚುನಾವಣೆಯಲ್ಲಿ ಬಂದ ಫಲಿತಾಂಶ ಬಿ ಆರ್ ಎಸ್ ಪಾಲಿಗೆ ನುಂಗಲಾರದ ತುತ್ತಿನ ರೀತಿಯಲ್ಲಿ ಪರಿಣಮಿಸಿತು…!!
2023 ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 119 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿ ಆರ್ ಎಸ್ ಕೇವಲ 39 ಕ್ಷೇತ್ರಗಳಿಗೆ ತ್ರಪ್ತಿ ಪಡಬೇಕಾಯಿತು, ಕಾಂಗ್ರೆಸ್ 64 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಮೊಟ್ಟ ಮೊದಲ ಬಾರಿಗೆ ತೆಲಂಗಾಣದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಿತು, ಸಿಎಂ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರಿಸಿದರು, 10 ವರ್ಷಗಳ ಕೆ ಸಿ ಆರ್ ಆಡಳಿತ ಅಂತ್ಯವಾಯಿತು, ಇನ್ನು ಬಿಜೆಪಿ ಈ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಮೂಲಕ 13.90% ಮತಗಳಿಗೆ ಪಡೆಯಿತು, ಬಿಜೆಪಿ ಪಾಲಿಗೆ ಇದು ದೊಡ್ಡ ಸಾಧನೆಯೇ…!
2024 ರ ಲೋಕಸಭಾ ಚುನಾವಣೆಯಲ್ಲಿ ಬಿ ಆರ್ ಎಸ್ ಗೆ ಕಾದಿತ್ತು ಗಂಡಾಂತರ
2023 ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ ಸಿ ಆರ್ ನೇತೃತ್ವದ ಬಿ ಆರ್ ಎಸ್ ಹೀನಾಯವಾಗಿ ಸೋತ ನಂತರ ಪಕ್ಷಾಂತರ ಚಟುವಟಿಕೆ ಜಾಸ್ತಿಯಾಯಿತು, ಬಿ ಆರ್ ಎಸ್ ನ ಬಹುತೇಕ ಸಂಸದರು ಪಕ್ಷ ತೊರೆದು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗೆ ವಾಲಿದರು…!
ಪಕ್ಷಾಂತರಕ್ಕೆ ಬಿ ಆರ್ ಎಸ್ ಬಲಿಪಶುವಾಯಿತು…!!
ಪರಿಣಾಮ 2024 ರ ಲೋಕಸಭಾ ಚುನಾವಣೆಯಲ್ಲಿ 10 ವರ್ಷಗಳ ಕಾಲ ತೆಲಂಗಾಣವನ್ನು ಏಕ ಚಕ್ರಾಧಿಪತಿ ರೀತಿಯಲ್ಲಿ ಆಡಳಿತ ನಡೆಸಿದ್ದ ಚಂದ್ರಶೇಖರ್ ರಾವ್ ನೇತೃತ್ವದ ಬಿ ಆರ್ ಎಸ್ ಪಾರ್ಟಿ ಒಂದೇ ಒಂದು ಸಂಸದ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ಒಟ್ಟು 17 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 8 ಹಾಗೂ ಎಐಎಂಐಎಂ 1 ಸ್ಥಾನದಲ್ಲಿ ಜಯ ದಾಖಲಿಸಿತು…!!
ಬಿಜೆಪಿಯ ಮತಗಳಿಕೆ ಪ್ರಮಾಣ ಶೇಕಡ 35 ಕ್ಕೆ ತಲುಪಿದರೆ, ಬಿ ಆರ್ ಎಸ್ ಕೇವಲ 16 ಶೇಕಡಾ ಮತ ಗಳಿಸಿ ಶೂನ್ಯ ಸಂಪಾದನೆ ಮಾಡಿತು, ಅಷ್ಟೇ ಅಲ್ಲ ಬಹುತೇಕ ಎಲ್ಲಾ ಕಡೆಗಳಲ್ಲಿ ಎರಡನೇ ಸ್ಥಾನಕ್ಕೂ ಬಿ ಆರ್ ಎಸ್ ಅಭ್ಯರ್ಥಿಗಳು ಬರಲಿಲ್ಲ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರವಾದ ಸ್ಪರ್ಧೆ ಈ ಬಾರಿ ತೆಲಂಗಾಣದಲ್ಲಿ ಕಾಣಲು ಸಿಕ್ಕಿತು…!
ಕೆ ಸಿ ಚಂದ್ರಶೇಖರ್ ರಾವ್ ಅವರ ಕುಟುಂಬ ರಾಜಕಾರಣ, ಮಗ ಹಾಗೂ ಮಗಳನ್ನು ಸಹ ರಾಜಕೀಯಕ್ಕೆ ತಂದದ್ದು, ಮಿತಿ ಮೀರಿದ ಭ್ರಷ್ಟಾಚಾರ, ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಿಸಿದ ಗ್ಯಾರಂಟಿಗಳ ನಡುವೆ ಬಿ ಆರ್ ಎಸ್ ಪಾರ್ಟಿ ನಿಧಾನವಾಗಿ ಮಂಕಾಗಿ ಹೋಯಿತು…!!
ಕೆ ಸಿ ಚಂದ್ರಶೇಖರ್ ರಾವ್ ಅವರ ಫ್ರೀ ಬೀಸ್ ಸಹ ಜನರು ಅವರ ಕೈ ಹಿಡಿಯುವಂತೆ ಮಾಡಲಿಲ್ಲ…!